ರಾಜ್ಯದಲ್ಲಿ 9 ತಿಂಗಳ ಅವಧಿಯಲ್ಲಿ 40 ವೈದ್ಯರ ಮೇಲೆ ಹಲ್ಲೆ !

Update: 2020-09-16 12:35 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.16: ಕರ್ನಾಟಕದಲ್ಲಿ ಕಳೆದ 9 ತಿಂಗಳ ಅವಧಿಯಲ್ಲಿ 40 ವೈದ್ಯರ ಮೇಲೆ ಹಲ್ಲೆ ನಡೆದಿರುವ ಬಗ್ಗೆ ವರದಿಗಳಾಗಿವೆ.

ಕೋವಿಡ್ ತಂದಿರುವ ಕಾರ್ಯ ಒತ್ತಡದಿಂದ ವೈದ್ಯರು ರಜೆ ರಹಿತವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವಧಿಯಲ್ಲೇ, ಅವರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಿವೆ. ವೈದ್ಯರ ರಕ್ಷಣೆಗೆ ರಾಜ್ಯದಲ್ಲಿ 2009ರಲ್ಲಿಯೇ ಪ್ರತ್ಯೇಕ ಕಾನೂನು ರೂಪಿಸಲಾಗಿದೆ. ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ನಡೆಸಿದರೆ 3 ವರ್ಷ ಜೈಲು ಶಿಕ್ಷೆ ಸಹಿತ ದಂಡ ವಿಧಿಸಲು ಅವಕಾಶವಿದೆ.

ಆಸ್ಪತ್ರೆಯ ವಸ್ತುಗಳನ್ನು ನಾಶ ಮಾಡಿದಲ್ಲಿ ಮೂಲ ದರದ ಮೂರು ಪಟ್ಟು ಹಣವನ್ನು ವಸೂಲಿ ಮಾಡಲಾಗುತ್ತದೆ. ಆದರೆ, ಈ ಕಾನೂನು ಪರಿಣಾಮಕಾರಿಯಾಗಿ ಜಾರಿ ಮಾಡದಿರುವುದು ಹಲ್ಲೆ ಪ್ರಕರಣಗಳನ್ನು ತಡೆಗಟ್ಟಲು ತೊಡಕಾಗಿದೆ ಎನ್ನುವುದು ವೈದ್ಯರ ವಾದ.

ಚಿಕಿತ್ಸೆ ನಿರಾಕರಣೆ, ಅಧಿಕ ಶುಲ್ಕ ವಸೂಲಿ, ಸೂಕ್ತ ಚಿಕಿತ್ಸೆ ಸಿಗದೆ ರೋಗಿ ಸಾವು ಸೇರಿದಂತೆ ವಿವಿಧ ಆರೋಪಗಳನ್ನು ಮುಂದಿಟ್ಟುಕೊಂಡು ಹಲ್ಲೆ ನಡೆಸಲಾಗುತ್ತಿದೆ. ಹತ್ತು ವರ್ಷಗಳಲ್ಲಿ ರಾಜ್ಯದ 344 ವೈದ್ಯರ ಮೇಲೆ ರೋಗಿಗಳ ಸಂಬಂಧಿಗಳು ಹಲ್ಲೆ ನಡೆಸಿರುವುದು ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ (ಐಎಂಎ) ಮಾಹಿತಿ ಪ್ರಕಾರ ಕೋವಿಡ್ ಕಾಣಿಸಿಕೊಂಡ ಬಳಿಕ ಪ್ರತಿ ವಾರ ಸರಾಸರಿ ಒಂದು ಹಲ್ಲೆ ಪ್ರಕರಣ ವರದಿಯಾಗುತ್ತಿದೆ.

ಇದರಲ್ಲಿ ಬೆಂಗಳೂರಿನ ಯಲಹಂಕದಲ್ಲಿ ಚಿಕಿತ್ಸೆ ನಡೆಸುತ್ತಿರುವ ವೈದ್ಯನ ಮೇಲೆ ಹಲ್ಲೆ ನಡೆಸುವ ಜತೆಗೆ ಆಂಬ್ಯುಲೆನ್ಸ್ ಚಾಲಕನ ಹಲ್ಲು ಉದುರಿಸಿರುವುದು, ಬೆಳಗಾವಿಯ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿ ಆಂಬ್ಯುಲೆನ್ಸ್ ಸುಟ್ಟು ಹಾಕಿರುವ ಘಟನೆಗಳೂ ಸೇರಿವೆ.

ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವುದು ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತಿದೆ. ಹಲ್ಲೆ ನಡೆದಾಗ ವೈದ್ಯರು ಮರ್ಯಾದೆಗೆ ಅಂಜಿ, ಪೊಲೀಸ್ ಠಾಣೆಯ ಮೆಟ್ಟಿಲೇರಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಹಲವು ಪ್ರಕರಣಗಳು ಹೊರಗಡೆ ಬರುತ್ತಿಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸರಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಬೇಸರ ವ್ಯಕ್ತಪಡಿಸಿದರು.

ಪ್ರಕರಣ ದಾಖಲಿಸಲು ಹಿಂದೇಟು: ಹಲ್ಲೆ ಪ್ರಕರಣಗಳು ನಡೆದಾಗ ದೂರು ನೀಡಿದರೂ ಪೊಲೀಸರು ಎಫ್‍ಐಆರ್ ದಾಖಲಿಸಲು ಹಿಂದೇಟು ಹಾಕುತ್ತಾರೆ. ಇನ್ನೊಂದೆಡೆ ಹಿರಿಯ ಅಧಿಕಾರಿಗಳು ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ವೈದ್ಯರನ್ನು ಹೆದರಿಸುತ್ತಿದ್ದಾರೆ. ಇದರಿಂದಾಗಿ ವೈದ್ಯರು ಅಸಹಾಯಕರಾಗಿದ್ದಾರೆ ಎಂದು ಐಎಂಎಯ ಕಿರುಕುಳ ನಿರ್ವಹಣೆ ಸಮಿತಿಯ ಅಧ್ಯಕ್ಷ ಡಾ. ಗಣೇಶ್ ಪ್ರಸಾದ್ ತಿಳಿಸಿದ್ದಾರೆ.

ರಾಜ್ಯದಲ್ಲಿ 38 ವೈದ್ಯರ ಸಾವು: ಐಎಂಎ ಕರ್ನಾಟಕ ಶಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ 38 ವೈದ್ಯರು ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಲ್ಲಿ ಸರಕಾರಿ ಆಸ್ಪತ್ರೆಗಳ ಜತೆಗೆ ಖಾಸಗಿ ಆಸ್ಪತ್ರೆಗಳ ವೈದ್ಯರು ಕೂಡ ಸೇರಿದ್ದಾರೆ. ಕೋವಿಡ್ ಕಾರ್ಯದಲ್ಲಿ ನಿರತರಾಗಿರುವ ಖಾಸಗಿ ವೈದ್ಯರಿಗೂ 50 ಲಕ್ಷ ವಿಮಾ ಸೌಲಭ್ಯ ಒದಗಿಸಬೇಕು ಎಂದು ಐಎಂಎ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News