ಕೃಷಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ: ಲಕ್ಷಾಂತರ ರೂ. ನಗದು, ಚಿನ್ನಾಭರಣ ಪತ್ತೆ
Update: 2020-09-16 18:25 IST
ಕಲಬುರಗಿ, ಸೆ.16: ಕಲಬುರಗಿ ಜಿಲ್ಲೆಯ ಜೇವರ್ಗಿ ಕೃಷಿ ಇಲಾಖೆಯ ಅಧಿಕಾರಿಯ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಅಧಿಕಾರಿಯ ಮನೆಯಲ್ಲಿ 9 ಲಕ್ಷ ರೂ. ನಗದು ಹಣ ಮತ್ತು ಚಿನ್ನಾಭರಣ ಪತ್ತೆಯಾಗಿದೆ.
ಸುನಿಲ್ ಕುಮಾರ್ ಅವರ ಕಲಬುರಗಿ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸುನಿಲ್ ಕುಮಾರ್ ಜೇವರ್ಗಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಎಸಿಬಿ ದಾಳಿ ಸಂದರ್ಭದಲ್ಲಿ ನಗದು ಹಣ ಮತ್ತು ಚಿನ್ನಾಭರಣ ಪತ್ತೆಯಾಗಿದೆ.
50 ಸಾವಿರ ರೂ.ಲಂಚ ಪಡೆಯುತ್ತಿದ್ದಾಗ ಕೃಷಿ ಅಧಿಕಾರಿ ಸುನಿಲ್ ಕುಮಾರ್ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಈ ಹಿನ್ನೆಲೆ ಕಲಬುರಗಿ ನಗರದಲ್ಲಿರುವ ಅವರ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ. ಈ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ, ನಗದು, ಆಸ್ತಿಯ ದಾಖಲೆ ಪತ್ತೆಯಾಗಿದೆ. ಎಸಿಬಿ ಎಸ್.ಪಿ.ಮಹೇಶ್ ಮೇಘಣ್ಣನವರ್ ನೇತೃತ್ವದಲ್ಲಿ ದಾಳಿ ನಡೆದಿದೆ.