ಬೈಕ್‍ನಲ್ಲಿ ತೆರಳುತ್ತಿದ್ದಾಗ ಕಿಸೆಯಲ್ಲಿದ್ದ ಮೊಬೈಲ್ ಸ್ಫೋಟ: ಯುವಕನಿಗೆ ಗಾಯ

Update: 2020-09-16 16:02 GMT

ಶಿವಮೊಗ್ಗ, ಸೆ.16: ಬೈಕ್‍ನಲ್ಲಿ ತೆರಳುತ್ತಿದ್ದಾಗ ಪ್ಯಾಂಟ್ ಕಿಸೆಯಲ್ಲಿದ್ದ ಮೊಬೈಲ್ ಸ್ಫೋಟಗೊಂಡು ಬೈಕ್ ಸವಾರ ಗಾಯಗೊಂಡಿರುವ ಘಟನೆ ತಾಲೂಕಿನ ಕುಪ್ಪಗಡ್ಡೆ ಗ್ರಾಮದ ಕೆರೆ ಸಮೀಪ ಬುಧವಾರ ನಡೆದಿದೆ.

ತವನಂದಿ ಗ್ರಾಮದ ಬಿ. ಶರತ್ (22) ಗಾಯಗೊಂಡ ಯುವಕನಾಗಿದ್ದು, ಈತ ತವನಂದಿ ಗ್ರಾಮದಿಂದ ಕುಪ್ಪಗಡ್ಡೆಗೆ ತೆರಳುವ ಸಂದರ್ಭದಲ್ಲಿ ಮೊಬೈಲ್ ಸ್ಫೋಟಗೊಂಡಿದೆ. ನಿಯಂತ್ರಣ ಕಳೆದುಕೊಂಡ ಯುವಕ ಬೈಕ್‍ನೊಂದಿಗೆ ಕೆರೆಗೆ ಬಿದ್ದಿದ್ದಾನೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ.

ಯುವಕನ ಬಲ ತೊಡೆ ಭಾಗದಲ್ಲಿ ಗಂಭೀರ ಗಾಯವಾಗಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಶರತ್ ಬಳಸುತ್ತಿದ್ದ ಮೊಬೈಲ್ ಚೀನಾದಲ್ಲಿ ತಯಾರಿಸಿದ್ದು ಹಾಗೂ ಬೆಂಗಳೂರಿನ ಶೋರೂಂವೊಂದರಲ್ಲಿ ಖರೀದಿಸಿದ್ದ ಎನ್ನಲಾಗುತ್ತಿದೆ.

ಆನವಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News