ಕಾಯ್ದೆಗಳ ಅಂಗೀಕಾರಕ್ಕೆ ವಿರೋಧ: ಶಾಸಕರುಗಳ ಕಚೇರಿ ಎದುರು ಐಕ್ಯ ಹೋರಾಟ ಸಮಿತಿಯಿಂದ ಪ್ರತಿಭಟನೆ

Update: 2020-09-16 16:22 GMT

ಮೈಸೂರು,ಸೆ.16: ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ರೈತ ಸಂಕುಲವನ್ನೇ ನಾಶ ಮಾಡುವ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಮತ್ತು ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಸುಗ್ರೀವಾಜ್ಞೆ ಅಂಗೀಕಾರಗೊಳ್ಳದಂತೆ ವಿರೋಧ ವ್ಯಕ್ತಪಡಿಸಬೇಕು ಎಂದು ಒತ್ತಾಯಿಸಿ ರೈತ-ದಲಿತ-ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ವತಿಯಿಂದ ಶಾಸಕರುಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ನಗರದ ಜಲದರ್ಶಿನಿ ಅತಿಥಿಗೃಹದ ಆವರಣದಲ್ಲಿರುವ ಶಾಸಕ ಎಲ್.ನಾಗೇಂದ್ರ ಮತ್ತು ಜಿ.ಟಿ.ದೇವೇಗೌಡರ ಕಚೇರಿ ಎದುರು ಬುಧವಾರ ರೈತರು ಪ್ರತಿಭಟನೆ ನಡೆಸಿದರು.

ಇದೇ ವೇಳೆ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ದೇಶದ ಜನತೆ ಕೊರೋನ ಸಂಕಷ್ಟದಲ್ಲಿ ನರಳುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೈತ ಸಂಕುಲವನ್ನೇ ನಾಶ ಮಾಡುವ ಮೂಲಕ ಮೂರು ಸುಗ್ರೀವಾಜ್ಞೆಗಳನ್ನು ಜಾರಿಗೆ ತಂದಿದ್ದು, ಸೆ.21ರಿಂದ ಆರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ಅಂಗೀಕಾರಕ್ಕಾಗಿ ಮಂಡಿಸುತ್ತಿದೆ. ಕರ್ನಾಟಕ ಭೂಸುಧಾರಣೆ ತಿದ್ದುಪಡಿ ಸುಗ್ರೀವಾಜ್ಞೆ 2020, ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ 2020, ಕಾರ್ಮಿಕರ ಹಕ್ಕುಗಳನ್ನು ದಮನ ಮಾಡುವ ಕಾರ್ಖಾನೆಗಳ ಕಾಯ್ದೆ ತಿದ್ದುಪಡಿ, ಇತರೆ ಕಾಯ್ದೆಗಳ ತಿದ್ದುಪಡಿ ಈ ಮೂರು ಸುಗ್ರೀವಾಜ್ಞೆಗಳು ರಾಜ್ಯದ ರೈತಾಪಿ ಹಾಗೂ ಕಾರ್ಮಿಕ ಜನಸಮೂಹಗಳ ಮೇಲೆ ಅತ್ಯಂತ ಗಂಭೀರ ದುಷ್ಪರಿಣಾಮ ಉಂಟುಮಾಡಬಲ್ಲ ಸುಗ್ರೀವಾಜ್ಞೆಗಳಾಗಿವೆ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ವಿದ್ಯುತ್ ಉತ್ಪಾದನೆ ಮತ್ತು ಸರಬರಾಜನ್ನು ಬಹುರಾಷ್ಟ್ರೀಯ ಕಂಪನೆಗಳ ವಶಕ್ಕೆ ನೀಡಲು ಹೊರಟಿದೆ. ಇದರಿಂದ ಪಂಪ್ ಸೆಟ್ ಬಳಸುತ್ತಿರುವ ರೈತರಿಗೆ ದೊರೆಯುತ್ತಿದ್ದ ಉಚಿತ ವಿದ್ಯುತ್ ನಿಲ್ಲಲಿದೆ. ಭಾಗ್ಯಜ್ಯೋತಿ, ಕುಟೀರಜ್ಯೋತಿ ಬಳಕೆದಾರರು ಹಾಗೂ ಗುಡಿಕೈಗಾರಿಕೆಗಳಿಗೆ ಸಿಗುತ್ತಿದ್ದ ವಿದ್ಯುತ್ ಸೌಲಭ್ಯ ಕಡಿತವಾಗಲಿದೆ. ಈ ತಿದ್ದುಪಡಿಗೆ ರಾಜ್ಯ ಸರ್ಕಾರ ಒಪ್ಪದಂತೆ ಒತ್ತಾಯಿಸಬೇಕು ಎಂದರು.

ಈ ಸುಗ್ರೀವಾಜ್ಞೆಗಳು ಆರ್ಥಿಕ ಅಸಮಾನತೆಯನ್ನು ತೀವ್ರಗೊಳಿಸುತ್ತದೆ. ಸಾರ್ವಭೌಮತ್ವ, ಸ್ವಾತಂತ್ರ್ಯ, ಸಮಾನತೆ, ಒಕ್ಕೂಟತತ್ವ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ಮುಂತಾದ ನಮ್ಮ ಸಂವಿಧಾನ ಮೂಲಭೂತ ಆಶಯ ಮತ್ತು ತತ್ವಗಳಿಗೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆಗೆ ಅಂಗೀಕಾರಕ್ಕೆ ಚರ್ಚೆಗೆ ತರುತ್ತಿರುವ ಈ ಸುಗ್ರೀವಾಜ್ಞೆಗಳನ್ನು ಸಂಪೂರ್ಣವಾಗಿ ವಿರೋಧಿಸಿ ಶಾಸನ ಆಗದಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಶಾಸಕ ಎಲ್.ನಾಗೇಂದ್ರ ಆಗಮಿಸಿ ರೈತ ಮುಖಂಡರುಗಳ ಮನವಿಯನ್ನು ಸ್ವೀಕರಿಸಿದರು. ನಂತರ ಮಾತನಾಡಿ ನಾನು ಸಹ ರೈತ  ಕುಟುಂಬದಿಂದ ಬಂದವನಾಗಿದ್ದು ರೈತರ ಕಷ್ಟ ಗೊತ್ತಿದೆ. ಹಾಗಾಗಿ ನಿಮ್ಮ ಮನವಿಯನ್ನು ಯಥವಾತ್ತಾಗಿ ನಮ್ಮ ಪಕ್ಷದ ಶಾಸಕಾಂಗ ಪಕ್ಷದಲ್ಲಿ ಮಂಡಿಸಿ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ನಗರದಲ್ಲಿ ಇಲ್ಲದ ಕಾರಣ ಅವರ ಆಪ್ತ ಸಹಾಯಕ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರುಗಳಾದ ಕುರುಬೂರು ಶಾಂತಕುಮಾರ್, ಹೊಸಕೋಟೆ ಬಸವರಾಜು, ಹೊಸೂರು ಕುಮಾರ್, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಕಲ್ಲಹಳ್ಳಿ ಕುಮಾರ್, ಸ್ವರಾಜ್ ಇಂಡಿಯಾದ ಉಗ್ರನರಸಿಂಹೇಗೌಡ, ಕಾರ್ಮಿಕ ಮುಖಂಡ ಚಂದ್ರಶೇಖರ ಮೇಟಿ, ರೈತ ಮುಖಂಡ ಪಿ.ಮರಂಕಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರೈತರ ಮನವಿ ಸ್ವೀಕರಿಸಲು ಬಾರದ ಶಾಸಕ ಎಸ್.ಎ.ರಾಮದಾಸ್

ಶಾಸಕರುಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲು ಮುಂದಾದ ರೈತರ ಮನವಿಯನ್ನು ಸ್ವೀಕರಿಸಲು ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಬರಲಿಲ್ಲ. ಇದರಿಂದ ರೈತರು ರೊಚ್ಚಿಗೆದ್ದರು.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿರುವ ಶಾಸಕ ಎಲ್.ನಾಗೇಂದ್ರ ಮತ್ತು ಜಿ.ಟಿ.ದೇವೇಗೌಡರ ಕಚೇರಿ ಎದುರು ರೈತ-ದಲಿತ-ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಇಲ್ಲಿಗೆ ಆಗಮಿಸಿ ಶಾಸಕ ರಾಮದಾಸ್ ಮನವಿ ಸ್ವೀಕರಿಸುವಂತೆ ರೈತರು ಕೋರಿಕೊಂಡಿದ್ದರು. ಆದರೆ ಶಾಸಕ ರಾಮದಾಸ್ ಬಾರದೆ ಮನೆಗೆ ಬರುವಂತೆ ಪೊಲೀಸರ ಬಳಿ ಹೇಳಿಕಳುಹಿಸಿದ್ದರು ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ರೈತರು, ಗನ್‍ಹೌಡ್ ವೃತ್ತದ ಕಾಡಾ ಕಚೇರಿಯಲ್ಲಿರುವ ಶಾಸಕ ರಾಮದಾಸ್ ಅವರ ಕಚೇರಿಗೆ ಮುತ್ತಿಗೆ ಹಾಕಿ ಧಿಕ್ಕಾರ ಕೂಗಿ ಪ್ರತಿಭಟಿಸಿದರು.

ಶಾಸಕರ ಆಪ್ತ ಸಹಾಯಕನಿಗೆ ತರಾಟೆ ತೆಗೆದುಕೊಂಡ ರೈತರು: ಪ್ರತಿಭಟನಾಕಾರರ ಬಳಿಗೆ ಆಗಮಿಸಿದ ಶಾಸಕರ ಆಪ್ತ ಸಹಾಯಕ ಶಾಸಕರು ಊರಲ್ಲಿ ಇಲ್ಲ ಅವರು ಬರುವುದು ತಡವಾಗುತ್ತದೆ ನೀವು ಇಲ್ಲಿಂದ ಹೊರಡಿ ಎಂದು ಹೇಳುತ್ತಿದ್ದಂತೆಯೇ ಕೆಂಡಮಂಡಲಾರದ ಪ್ರತಿಭಟನಾಕರರು ಆಪ್ತ ಸಹಾಯಕನನ್ನು ತರಾಟೆಗೆ ತೆಗೆದುಕೊಂಡರು.

ಶಾಸಕರು ಬರುವವರೆಗೂ ಇಲ್ಲಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ದೂರವಾಣಿ ಮೂಲಕ ಮಾಹಿತಿ ಪಡೆದ ಶಾಸಕ ರಾಮದಾಸ್, ಒಂದು ಗಂಟೆ ಕಾಲಾವಕಾಶ ನೀಡುವಂತೆ ಕೇಳಿಕೊಂಡು ನಂತರ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News