'ಎಲ್ಲರಿಗೂ ಮನೆ' ಯೋಜನೆ ನೆನೆಗುದಿಗೆ: ಉಪವಾಸ ಸತ್ಯಾಗ್ರಹದ ಎಚ್ಚರಿಕೆ ನೀಡಿದ ಜೆಡಿಎಸ್

Update: 2020-09-16 16:35 GMT

ಮಡಿಕೇರಿ ಸೆ.16: ಮಡಿಕೇರಿ ನಗರದಲ್ಲಿ ವಸತಿ ರಹಿತ ಕಡುಬಡವರು ಹಾಗೂ ಕಾರ್ಮಿಕ ವರ್ಗಕ್ಕೆ ನೆಲೆ ಕಲ್ಪಿಸಲು ವಸತಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದೆಂದು ಜಿಲ್ಲಾ ಜಾತ್ಯತೀತ ಜನತಾದಳದ ಮಹಿಳಾ ಘಟಕ ಎಚ್ಚರಿಕೆ ನೀಡಿದೆ.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಹಿಳಾ ಜೆಡಿಎಸ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ, ವಸತಿ ಹಾಗೂ ನಿವೇಶನ ರಹಿತರಿಗೆ ನಗರಸಭೆಯಿಂದ ನೀಡಲಾಗುವ ‘ಎಲ್ಲರಿಗೂ ಮನೆ’ ಎಂಬ ಯೋಜನೆಯಡಿ ಪ್ರತಿವರ್ಷ ಅರ್ಜಿದಾರರಿಂದ ಅರ್ಜಿ ಆಹ್ವಾನಿಸಲಾಗುತ್ತದೆ. ಅದರಂತೆ ಹಲವು ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ವಸತಿ ಯೋಜನೆಯನ್ನು ಅನುಷ್ಠಾನಗೊಳಿಸದೆ ಇರುವುದು ಖಂಡನೀಯ ಎಂದರು.

2018ರಲ್ಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದಾಗ ಕರ್ಣಂಗೇರಿಯಲ್ಲಿ ನಿವೇಶನ ರಹಿತರಿಗಾಗಿ ಜಾಗವನ್ನು ಗುರುತಿಸಿ, ಫಲಾನುಭವಿಗಳ ಪಟ್ಟಿಯನ್ನು ತಯಾರಿಸಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಜಿಲ್ಲಾಡಳಿತವಾಗಲಿ, ನಗರಸಭೆಯಾಗಲಿ ಈ ಬಗ್ಗೆ ಗಮನ ಹರಿಸಿಲ್ಲ ಎಂದು ಆರೋಪಿಸಿದರು.

ಜಿಲ್ಲೆಯ ಉಸ್ತುವಾರಿ ಸಚಿವರೇ ವಸತಿ ಸಚಿವರಾಗಿರುವುದರಿಂದ ಜಿಲ್ಲಾಡಳಿತ ಹಾಗೂ ನಗರಸಭೆ ಸಚಿವರ ಗಮನ ಸೆಳೆದು ಸರ್ಕಾರಿ ಜಾಗವನ್ನು ಗುರುತಿಸಿ ವಸತಿ ರಹಿತರಿಗೆ ಮನೆ ನಿರ್ಮಿಸಿಕೊಡಬೇಕೆಂದು ಲೀಲಾಶೇಷಮ್ಮ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ, ಕೊರೋನಾ, ಲಾಕ್‍ಡೌನ್‍ಗಳಿಂದಾಗಿ ಹಲವು ಮಂದಿ ಸಂಕಷ್ಟವನ್ನು ಎದುರಿಸುತ್ತಿದ್ದು, ಜೀವನ ನಿರ್ವಹಣೆಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕನಿಷ್ಠ ಸ್ವಂತ ನೆಲೆ ಒದಗಿಸುವ ಕಾರ್ಯವನ್ನಾದರೂ ಸರ್ಕಾರ ಮಾಡಬೇಕಿದೆ ಎಂದರು.

ಜಿಲ್ಲಾಡಳಿತ ವಸತಿ ಯೋಜನೆ ಬಗ್ಗೆ ಸೂಕ್ತ ಭರವಸೆ ನೀಡದಿದ್ದಲ್ಲಿ ಮುಂದಿನ ತಿಂಗಳು ಪಕ್ಷದ ವತಿಯಿಂದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಡಿಕೇರಿ ನಗರಾಧ್ಯಕ್ಷೆ ಸುನಂದ, ಉಪಾಧ್ಯಕ್ಷೆ ಎನ್.ಸಿ. ಮಮತ, ಕಾರ್ಯದರ್ಶಿ ಜೆಸಿಂತಾ ಶ್ರೀಧರ್, ಸದಸ್ಯರಾದ ಕುಸುಮ ಹಾಗೂ ಲತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News