ಸರಕಾರಿ ವೈದ್ಯಾಧಿಕಾರಿಗಳ ಸಭೆ ನಡೆಸಿದ ಬಿ.ವೈ.ವಿಜಯೇಂದ್ರ: ಅಧಿಕಾರ ಕೊಟ್ಟವರ್ಯಾರು ಎಂದು ಪ್ರಶ್ನಿಸಿದ ಕಾಂಗ್ರೆಸ್

Update: 2020-09-16 17:32 GMT

ಬೆಂಗಳೂರು, ಸೆ. 16: `ಮುಖ್ಯಮಂತ್ರಿ ಅಲ್ಲ, ಮಂತ್ರಿಯಲ್ಲ, ಸಂಸದರಲ್ಲ, ಶಾಸಕರಲ್ಲ, ಗ್ರಾಮ ಪಂಚಾಯತ್ ಸದಸ್ಯರೂ ಅಲ್ಲ, ಯಾವುದೇ ಸಾಂವಿಧಾನಿಕ ಹುದ್ದೆ ಹೊಂದಿರದ ತಾವು ಸರಕಾರಿ ವೈದ್ಯಾಧಿಕಾರಿಗಳ ಸಭೆ ನಡೆಸಿದ್ದೇಕೆ, ಆ ಅಧಿಕಾರ ಕೊಟ್ಟವರ್ಯಾರು?' ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಪ್ರಶ್ನಿಸಿದೆ.

ಬುಧವಾರ ವಿಜಯೇಂದ್ರ ಸರಕಾರಿ ವೈದ್ಯಾಧಿಕಾರಿಗಳ ಸಭೆ ನಡೆಸಿರುವುದಕ್ಕೆ ಸಂಬಂಧಪಟ್ಟ ಫೋಟೋವೊಂದನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿರುವ ಕಾಂಗ್ರೆಸ್, `ಆಡಳಿತ ಯಂತ್ರದಲ್ಲಿ ಮೂಗು ತೂರಿಸಿದ ಈ `ದಲ್ಲಾಳಿತನ' ಪ್ರಜಾಪ್ರಭುತ್ವದ ಪವಿತ್ರತೆಗೆ ಧಕ್ಕೆ ತಂದಿದೆ' ಎಂದು ತೀವ್ರ ವಾಗ್ದಾಳಿ ನಡೆಸಿದೆ.

ನಾನು ಜವಾಬ್ದಾರಿಯುತ ಉಪಾಧ್ಯಕ್ಷ: ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ವಿಜಯೇಂದ್ರ, `ಯುಪಿಎ ಸರಕಾರದ ಆಡಳಿತಾವಧಿಯಲ್ಲಿ ಈ ಪ್ರಜಾಪ್ರಭುತ್ವ ದೇಶದ ಅತ್ಯುನ್ನತ ಸ್ಥಾನ ಅಲಂಕರಿಸಿದ ಪ್ರಧಾನಮಂತ್ರಿಗಳನ್ನೆ ತಮ್ಮ ಮನೆಗೆ ಬುಲಾವ್ ಮಾಡಿಕೊಳ್ಳುತ್ತಿದ್ದ ಗುಲಾಮಿ ಪದ್ಧತಿಯ ಸಂಸ್ಕೃತಿ ನಮ್ಮದಲ್ಲ. ನಾನು ಯಡಿಯೂರಪ್ಪ ಕುಟುಂಬದ ಸದಸ್ಯ ಎನ್ನುವುದಕ್ಕಿಂತ ರಾಜ್ಯ ಬಿಜೆಪಿಯ ಜವಾಬ್ದಾರಿಯುತ ಉಪಾಧ್ಯಕ್ಷನಾಗಿದ್ದೇನೆ' ಎಂದು ಸ್ಪಷ್ಟನೆ ನೀಡಿದ್ದಾರೆ.

'ನನ್ನ ಬಳಿ ಗೌರವ, ವಿಶ್ವಾಸವಿರಿಸಿ ಯಾರೇ ಬಂದರೂ ಅದಕ್ಕೆ ಸ್ಪಂದಿಸುವುದು ನನ್ನ ಕರ್ತವ್ಯ. ವಿಪಕ್ಷಗಳು ಸದಾ ಹಳದಿ ಕನ್ನಡಕ ಧರಿಸಿ ನನ್ನ ಚಲನವಲನದ ಮೇಲೆ ನಿಗಾ ಇರಿಸುವುದು ಬಿಟ್ಟು ರಾಜ್ಯದ ಅಭಿವೃದ್ಧಿ ಕುರಿತು ರಚನಾತ್ಮಕ ಸಲಹೆಗಳಿದ್ದಲ್ಲಿ, ಸರಕಾರಕ್ಕೆ ನೀಡಲಿ. ಅದುವೇ ರಾಜಕೀಯ ಪಕ್ಷದ ನಿಜವಾದ ಪ್ರಜಾಸತ್ತಾತ್ಮಕ ನಡೆಯಾಗಿದೆ' ಎಂದು ವಿಜಯೇಂದ್ರ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News