ಚಿಕ್ಕಮಗಳೂರು: 6 ತಿಂಗಳು ಮುಚ್ಚಿದ್ದ ಜಿಲ್ಲಾ ಗ್ರಂಥಾಲಯ ಸಾರ್ವಜನಿಕರ ಸೇವೆಗೆ ಮುಕ್ತ

Update: 2020-09-16 17:45 GMT

ಚಿಕ್ಕಮಗಳೂರು, ಸೆ.16: ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕಳೆದ 6 ತಿಂಗಳಿನಿಂದ ಬಾಗಿಲು ಮುಚ್ಚಿದ್ದ ನಗರ ಕೇಂದ್ರ ಗ್ರಂಥಾಲಯ ಬುಧವಾರ ಸಾರ್ವಜನಿಕರಿಗೆ ಮುಕ್ತವಾಗಿದೆ. ಸಾಹಿತ್ಯ, ಪತ್ರಿಕೆಗಳ ಪ್ರೇಮಿಗಳು ಮತ್ತು ಸ್ವರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿಗಳು, ಯುವಜನತೆ ಸಂತಸಗೊಂಡಿದ್ದು, ಇದೀಗ ಕೇಂದ್ರ ಗ್ರಂಥಾಲಯದಲ್ಲಿ ಓದಿ ದಾಹ ತೀರಿಸಿಕೊಳ್ಳಲು ಮುಂದಾಗಿದ್ದಾರೆ.

ನಗರದ ಜಿಲ್ಲಾ ನ್ಯಾಯಾಲಯದ ಸಮೀಪದಲ್ಲಿರುವ ನಗರ ಕೇಂದ್ರ ಗ್ರಂಥಾಲಯ ಲಾಕ್‍ಡೌನ್ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕರ ಸೇವೆಗೆ ಮುಕ್ತವಾಗಿದ್ದು, ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಓದುಗರ ಓದಿನ ದಾಹ ತೀರಿಸಲು ಮುಂದಾಗಿದೆ. ಸರಕಾರದ ಕೋವಿಡ್ ಮಾರ್ಗಸೂಚಿ ಹಾಗೂ ಗ್ರಂಥಾಲಯ ಇಲಾಖೆಯ ನಿರ್ದೇಶನದಂತೆ ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡುವುದು ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತಹ ನಿಯಮಗಳನ್ನು ಓದುಗರಿಗೆ ಕಡ್ಡಾಯ ಮಾಡಿರುವ ಗ್ರಂಥಾಲಯದ ಮೇಲ್ವಿಚಾರಕರು ಗ್ರಂಥಾಲಯವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದ್ದಾರೆ.

ಬುಧವಾರ ಗ್ರಂಥಾಲಯವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಗ್ರಂಥಾಲಯವನ್ನು ಸಂಪೂರ್ಣವಾಗಿ ಸುಣ್ಣ ಬಣ್ಣ ಬಳಿದು ರಾಸಾಯನಿಕ ಸಿಂಪಡಿಸಿ ಸ್ವಚ್ಛತೆ ಕಾಯ್ದುಕೊಳ್ಳಲಾಗಿದೆ. ಬುಧವಾರ ಗ್ರಂಥಾಲಯದ ಆವರಣದಲ್ಲಿ ಪತ್ರಿಕೆ, ಪುಸ್ತಕಗಳನ್ನು ಓದಲು ಸಾರ್ವಜನಿಕರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮುಗಿಬಿದ್ದಿದ್ದು, ಬರಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಎಸ್‍ಡಿಎ, ಎಫ್‍ಡಿಎ ಸೇರಿದಂತೆ ಪೊಲೀಸ್ ಇಲಾಖೆಯ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳ ಮೊರೆ ಹೋಗುತ್ತಿದ್ದ ದೃಶ್ಯಗಳು ಕಂಡು ಬಂದವು.

ಕಳೆದ 6 ತಿಂಗಳ ಬಳಿಕ ಗ್ರಂಥಾಲಯ ಸಾರ್ವಜನಿಕರ ಸೇವೆಗೆ ಮುಕ್ತಗೊಂಡಿರುವ ಬಗ್ಗೆ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಪಾಲಕ ಉಮೇಶ್ ವಾರ್ತಾಭಾರತಿಯೊಂದಿಗೆ ಮಾತನಾಡಿ, ಲಾಕ್‍ಡೌನ್ ತೆರವಿನ ಬಳಿಕ ಎಲ್ಲ ಎಲ್ಲ ಚಟುವಟಿಕೆಗಳು ಪುನಾರಂಭಗೊಂಡಿದ್ದವು. ಈ ವೇಳೆ ಸಾರ್ವಜನಿಕರು, ಓದುಗಿರಿಂದ ಗ್ರಂಥಾಲಯ ಪುನಾರಂಭಕ್ಕೆ ವ್ಯಾಪಕ ಬೇಡಿಕೆ ಸಲ್ಲಿಸಿದ್ದವು. ಸಂಘ ಸಂಸ್ಥೆಗಳೂ ಸರಕಾರಕ್ಕೆ ಮನವಿ ಮಾಡಿದ್ದವು. ಆದರೆ ಸರಕಾರ ಹಾಗೂ ಇಲಾಖೆಯ ಆದೇಶವಿಲ್ಲದೇ ಗ್ರಂಥಾಲಯ ಆರಂಭ ಸಾಧ್ಯವಿರಲ್ಲಿ. ಆದರೆ ಇತ್ತೀಚೆಗೆ ಸರಕಾರ ಗ್ರಂಥಾಲಯಗಳನ್ನು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲು ಆದೇಶಿಸಿದೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಸೇವೆ ಒದಗಿಸಲು ಸರಕಾರ ಆದೇಶಿಸಿದ ಹಿನ್ನೆಲೆಯಲ್ಲಿ ಬುಧವಾರದಿಂದ ನಗರ ಕೇಂದ್ರ ಗ್ರಂಥಾಲಯವನ್ನು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗಿದೆ. ಗ್ರಂಥಾಲಯಕ್ಕೆ ಬರುವ ಎಲ್ಲರಿಗೂ ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್ ಧಾರಣೆ, ಸ್ಯಾನಿಟೈಸ್ ಕಡ್ಡಾಯವಾಗಿದೆ. ಗ್ರಂಥಾಲಯದ ಒಳಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆಯೇ ಖುರ್ಚಿಗಳನ್ನು ಅಳವಡಿಸಲಾಗಿದೆ. ಪ್ರತಿದಿನ ಬೆಳಗ್ಗೆ ಸಾಯಂಕಾಲ ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ರಾಸಾಯನಿಕ ಸಿಂಪಡಣೆಯನ್ನೂ ಮಾಡಲಾಗುತ್ತಿದೆ ಎಂದರು.

ಗ್ರಂಥಾಲಯದಲ್ಲಿ ಇನ್ನು ಮುಂದೆ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಸಾರ್ವಜನಿಕರಿಗೆ ಸೇವೆ ಸಿಗಲಿದೆ. ಗ್ರಂಥಾಲಯದ ಸೇವೆ ಪುನಾರಂಭಗೊಂಡಿರುವ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟನೆ ನೀಡಲಾಗಿದೆ. ಫೇಸ್ಬುಕ್, ವಾಟ್ಸ್ ಆಪ್‍ಗಳಲ್ಲೂ ಸಂದೇಗಳನ್ನು ಹರಡಲಾಗಿದೆ. ನಗರದ ಕೇಂದ್ರ ಗ್ರಂಥಾಲಯ ಪ್ರತಿದಿನ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಪತ್ರಿಕೆಗಳನ್ನು ಓದಲು ಎಲ್ಲ ವರ್ಗದ ಜನರು ಭೇಟಿ ನೀಡುತ್ತಾರೆ. ಸಾಹಿತ್ಯ, ಕಥೆ, ಕಾದಂಬರಿಗಳ ಪುಸ್ತಕಗಳನ್ನು ಓದಲು ನೂರಾರು ಮಂದಿ ಪ್ರತಿದಿನ ಬರುತ್ತಾರೆಕೀ ಪೈಕಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳು, ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗ್ರಂಥಾಲಯವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದ ಅವರು, 6 ತಿಂಗಳು ಗ್ರಂಥಾಲಯ ಬಂದ್ ಆಗಿದ್ದರೂ ಸಿಬ್ಬಂದಿ ಇಲ್ಲಿರುವ ಪುಸ್ತಕ ಭಂಡಾರಗಳ ಸ್ವಚ್ಛತೆ ಮಾಡಿದ್ದರಿಂದ ಪುಸ್ತಕಗಳಿಗೆ ಹಾನಿಯಾಗಿಲ್ಲ ಎಂದರು.

ನಗರ ಕೇಂದ್ರ ಗ್ರಂಥಾಲಯಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಿಕೊಳ್ಳುವ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಗ್ರಂಥಾಲಯದ ಹೊಂಬದಿಯಲ್ಲಿ ಸ್ಪರ್ದಾತ್ಮಕ ಪರೀಕ್ಷೆಗಳ ತಯಾರಿಗೆಂದೇ ಹೊಸ ಕಟ್ಟಡ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಲಿದೆ.

- ಉಮೇಶ್, ಮುಖ್ಯ ಗ್ರಂಥಪಾಲಕ, ನಗರ ಕೇಂದ್ರ ಗ್ರಂಥಾಲಯ

ನಾನು ಈ ಹಿಂದೆ ಪ್ರತಿದಿನ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದೆ. ಕೋವಿಡ್ ಹಿನ್ನೆಲೆಯಲ್ಲಿ ಗ್ರಂಥಾಲಯವನ್ನು ಮುಚ್ಚಿದ್ದರಿಂದ ಬೇಸರವಾಗಿತ್ತು. ಇತ್ತೀಚೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ಸಿಗದೇ ತಯಾರಿ ಅಪೂರ್ಣವಾಗಿತ್ತು. ಬುಧವಾರ ಗ್ರಂಥಾಲಯ ಆರಂಭದ ಬಗ್ಗೆ ತಿಳಿದಿದ್ದು, ಇಂದಿನಿಂದಲೇ ಪರೀಕ್ಷೆಗೆ ತಯಾರಿ ನಡೆಸಲು ಆಗಮಿಸಿದ್ದೇನೆ.

- ವೀಣಾ, ಉಪನ್ಯಾಸಕಿ, ಸೇಂಟ್ ಜೋಸೆಫ್ ಕಾಲೇಜು

ಮುಂದಿನ ರವಿವಾರ ಹಾಗೂ ಅಕ್ಟೋಬರ್ ತಿಂಗಳಲ್ಲಿ ಪೊಲೀಸ್ ಪೇದೆಗಳ ನೇಮಕಾತಿ ಪರೀಕ್ಷೆ ಇದೆ. ಇದಕ್ಕೆ ನಾನು ನೋಂದಾಯಿಸಿದ್ದು, ಮನೆಯಲ್ಲಿ ಪರೀಕ್ಷಾ ತಯಾರಿ ಸಾಧ್ಯವಾಗುತ್ತಿರಲಿಲ್ಲ. ಗ್ರಂಥಾಲಯ ಮುಚ್ಚಿದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಪುಸಕ್ತಗಳೂ ಸಿಗುತ್ತಿರಲಿಲ್ಲ. ಸದ್ಯ ಗ್ರಂಥಾಲಯ ಆರಂಭವಾಗಿದ್ದು, ಎಲ್ಲ ರೀತಿಯ ಪುಸ್ತಕಗಳೊಂದಿಗೆ ಯಾವುದೇ ಸಮಸ್ಯೆ ಇಲ್ಲದೇ ಪರೀಕ್ಷಾ ತಯಾರಿ ಮಾಡಲು ಸಾಧ್ಯವಾಗುತ್ತಿದೆ. ಇಲ್ಲಿನ ಸಿಬ್ಬಂದಿ, ಮೇಲ್ವಿಚಾರಕರು ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಾರೆ. ಅನೇಕ ಬಂದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೋಂದಾಯಿಸಿಕೊಂಡವರು ಲೈಬ್ರರಿಗೆ ಓದಲು ಬರುತ್ತಿರುವುದರಿಂದ ಅವರೊಂದಿಗೆ ಚರ್ಚಿಸಿ ವ್ಯಾಸಂಗ ಮಾಡಲು ಸಾಧ್ಯವಾಗುತ್ತಿದೆ.

- ನಾಗರಾಜ್, ಪೊಲೀಸ್ ಇಲಾಖೆ ನೇಮಕಾತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News