ಯುವಕರಿಂದ 26 ದಿನಗಳಲ್ಲಿ 30ಕ್ಕೂ ಅಧಿಕ ಕೊರೋನ ಸೋಂಕಿತರ ಅಂತ್ಯಸಂಸ್ಕಾರ

Update: 2020-09-17 18:07 GMT

ಬೆಳಗಾವಿ, ಸೆ.17: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಯುವಕರ ತಂಡವೊಂದು ಆ.21ರಂದು ಹೊಸದಾಗಿ ಏಕತಾ ಫೌಂಡೇಷನ್ ಸ್ಥಾಪಿಸಿ, ನಿಪ್ಪಾಣಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರ ಮಾಡುವ ಕೆಲಸ ಮಾಡುತ್ತಿದ್ದಾರೆ.

ಕೊರೋನ ಸೋಂಕಿತರ ಅಂತ್ಯಕ್ರಿಯೆ ಮಾಡಲು ಸ್ವತಃ ಕುಟುಂಬಸ್ಥರು, ಸಂಬಂಧಿಕರು ಹಿಂದೇಟು ಹಾಕುತ್ತಿರುವ ಪರಿಸ್ಥಿತಿಯಲ್ಲಿ ಏಕತಾ ಫೌಂಡೇಷನ್ ಈ ಕಾರ್ಯ ಮಾಡಲು ಮುಂದಾಗಿದೆ.

ಕೇವಲ 26 ದಿನಗಳಲ್ಲಿ 30ಕ್ಕೂ ಅಧಿಕ ಕೊರೋನ ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ. ಸೋಂಕಿತ ವ್ಯಕ್ತಿ ಮೃತಪಟ್ಟಿದ್ದರೆ, ಹಗಲು-ರಾತ್ರಿ ಎನ್ನದೇ ಅಲ್ಲಿಗೆ ತೆರಳಿ ಅವರ ಮೃತ ದೇಹವನ್ನು ತಂದು ಆಯಾ ಧರ್ಮದ ವಿಧಿ ವಿಧಾನಗಳ ಅನುಸಾರ ಅಂತ್ಯಕ್ರಿಯೆ ನೆರವೇರಿಸುತ್ತಾರೆ.

ಏಕತಾ ಫೌಂಡೇಶನ್ ಕಾರ್ಯದಲ್ಲಿ ಬೇರೆ ಬೇರೆ ಸಮುದಾಯದ ಸಾಮಾಜಿಕ ಕಾರ್ಯಕರ್ತರು ಮತ್ತು ವೈದ್ಯರು ಸಹ ಭಾಗಿಯಾಗಿ ಮಾನವೀಯತೆ ಮೆರೆದಿದ್ದಾರೆ. ಅಂತ್ಯಕ್ರಿಯೆ ವೇಳೆಯಲ್ಲಿ ಫೌಂಡೇಷನ್ ಸದಸ್ಯರು ಅತ್ಯಂತ ಎಚ್ಚರಿಕೆ ವಹಿಸಿ ಪಿಪಿಇ ಕಿಟ್ ಧರಿಸಿ, ಸಾನಿಟೈಸರ್ ಉಪಯೋಗಿಸಿ ಅಂತ್ಯಕ್ರಿಯೆ ಮಾಡುತ್ತಿದ್ದಾರೆ. ಯುವಕರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News