ಜಿಎಸ್‌ಟಿ ಬಾಕಿ 25,500 ಕೋಟಿ ರೂ.ಹಣವನ್ನು ಪಟ್ಟು ಹಿಡಿದು ಕೇಳಿ: ಬಿಎಸ್‌ವೈಗೆ ಕಾಂಗ್ರೆಸ್ ಆಗ್ರಹ

Update: 2020-09-18 12:52 GMT

ಬೆಂಗಳೂರು, ಸೆ. 18: `ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೆ, ಪ್ರಧಾನಿ ಮೋದಿಯವರ ಭೇಟಿಯ ವೇಳೆ, ಸಂವಿಧಾನದ ಆಶಯವನ್ನೂ ಮೀರಿ ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸಲಾಗುತ್ತಿದೆ. ಕೇಂದ್ರ ಗೃಹ ಸಚಿವರೇ ಸರಕಾರಿ ಕಚೇರಿಗಳಲ್ಲಿ ಹಿಂದಿ ಬಳಕೆಗೆ ಸೂಚಿಸಿದ್ದಾರೆ. ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಲಿದೆ. ರಾಜ್ಯಗಳ ಸಾಂವಿಧಾನಿಕ ಹಕ್ಕುಗಳ ಮೇಲೆ ಸವಾರಿ ಮಾಡದಂತೆ ಎಚ್ಚರಿಕೆ ನೀಡಿ, ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಿ' ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನೆಪವೊಡ್ಡಿ ಬೆಂಗಳೂರು ಮಾರಾಟಕ್ಕೆ ಮುಂದಾಗಿರುವ ಬಿ.ಎಸ್.ಯಡಿಯೂರಪ್ಪನವರೇ ನೆರೆ ಪರಿಹಾರ, ಕೋವಿಡ್ ನಿರ್ವಹಣೆ, ಜಿಎಸ್‌ಟಿ ಪಾಲು, ವಿಶೇಷ ಅನುದಾನ ಎಲ್ಲದರಲ್ಲಿಯೂ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಪ್ರಧಾನಿಯವರ ಬಳಿ ತಮ್ಮ ಖಡಾಖಂಡಿತ ಅಭಿಪ್ರಾಯವನ್ನು ಮಂಡಿಸಿ, ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಿ' ಎಂದು ಒತ್ತಾಯಿದೆ.

`ಮುಖ್ಯಮಂತ್ರಿ ಬಿಎಸ್‍ವೈ ಅವರೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ, ಅದಕ್ಕಾಗಿ ಸಾಲ ಪಡೆದು ಆ ಹೊರೆಯನ್ನು ರಾಜ್ಯದ ಜನತೆಯ ಮೇಲೆ ಹೊರಿಸುವ ಬದಲು, ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ವೇಳೆ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ಜಿಎಸ್‌ಟಿ ಬಾಕಿ 25,500ಕೋಟಿ ರೂಪಾಯಿ ಹಣವನ್ನು ಪಟ್ಟು ಹಿಡಿದು ಕೇಳಿ ಪಡೆಯಿರಿ. ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಿ' ಎಂದು ಮನವಿ ಮಾಡಿದೆ.

ಮುಖ್ಯಮಂತ್ರಿ ಬಿಎಸ್‍ವೈ ಅವರೇ, ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಅವಕಾಶ ಪಡೆದಿದ್ದೀರಿ. ಈ ಅವಕಾಶವನ್ನು ವ್ಯರ್ಥವಾಗದಂತೆ ನೋಡಿಕೊಳ್ಳಿ. ರಾಜ್ಯದ ಬಗೆಗಿನ ಕೇಂದ್ರ ಸರಕಾರದ ಮಲತಾಯಿ ಧೋರಣೆಯ ಬಗ್ಗೆ ಧ್ವನಿಯೆತ್ತಿ. ರಾಜ್ಯಕ್ಕೆ ಬರಬೇಕಾದ ಅನುದಾನಗಳನ್ನು ಧೈರ್ಯವಾಗಿ ಕೇಳಿ ಪಡೆಯಿರಿ. ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡಿ ಎಂದು ಒತ್ತಾಯ ಮಾಡಿದೆ.

ಬೆಂಗಳೂರನ್ನೇ ಮಾರಾಟಕ್ಕಿಟ್ಟ ಬಿಜೆಪಿ

ಭ್ರಷ್ಟ ಬಿಜೆಪಿ ಸರಕಾರ ಭೂಗಳ್ಳರು, ರಿಯಲ್ ಎಸ್ಟೇಟ್ ಉಧ್ಯಮಿಗಳೊಂದಿಗೆ ಶಾಮೀಲಾಗಿ ಬೆಂಗಳೂರನ್ನೇ ಮಾರಾಟಕ್ಕಿಟ್ಟಿದೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ 18 ಕಿ.ಮೀ ವ್ಯಾಪ್ತಿಯ 21 ಸಾವಿರ ಎಕರೆ ಸರಕಾರಿ ಜಮೀನು ಮಾರಾಟಕ್ಕೆ ಮುಂದಾಗಿರುವುದು ಬಿಜೆಪಿ ಸರಕಾರದ ಹಗಲು ದರೋಡೆಯ ಪ್ರಯತ್ನ.

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News