ಕೋವಿಡ್ ನಿಯಮಗಳನ್ನು ಜಾರಿಗೊಳಿಸುವಲ್ಲಿ ಸರಕಾರ ವಿಫಲ: ಹೈಕೋರ್ಟ್ ಅಸಮಾಧಾನ

Update: 2020-09-18 12:54 GMT

ಬೆಂಗಳೂರು, ಸೆ.18: ಮಾಸ್ಕ್ ಧರಿಸುವ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳುವ ನಿಯಮಗಳು ಎಲ್ಲಿಯೂ ಪಾಲನೆಯಾಗುತ್ತಿಲ್ಲ. ಬರೀ ಹೇಳಿಕೆಗಳಲ್ಲಿ ಅಷ್ಟೇ ಈ ನಿಯಮಗಳಿದ್ದು ಕಟ್ಟುನಿಟ್ಟಾಗಿ ಜಾರಿಗೊಳಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕೊರೋನ ಮಾರ್ಗಸೂಚಿಗಳ ಉಲ್ಲಂಘನೆ ಕುರಿತ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಮಾಸ್ಕ್ ಧರಿಸುವ ಮತ್ತು ಸುರಕ್ಷಿತ ಅಂತರ ಕಾಪಾಡಿಕೊಳ್ಳುವ ವಿಚಾರದಲ್ಲಿ ಅಧಿಕಾರಿಗಳು ಕಟ್ಟುನಿಟ್ಟಾಗಿ ಕ್ರಮ ಜರುಗಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿತು.

ರಾಜ್ಯದಲ್ಲಿ ನಿತ್ಯವೂ 8 ಸಾವಿರ ಕೊರೋನ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ರಾಜಧಾನಿ ಬೆಂಗಳೂರಿನಲ್ಲಿ ದಿನಕ್ಕೆ 2 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಇಂಥ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಆದರೆ, ಗಣ್ಯರಿಂದ ನಿರಂತರವಾಗಿ ನಿಯಮಗಳು ಉಲ್ಲಂಘನೆಯಾಗುತ್ತಿವೆ. ಗಣ್ಯರ ವಿಚಾರದಲ್ಲಿ ಸರಕಾರ ಕಟ್ಟುನಿಟ್ಟಾಗಿ ವರ್ತಿಸದೆ ತಾರತಮ್ಯ ಎಸಗುತ್ತಿದೆ. ಆದರೂ ಸರಕಾರ ಯಾವುದೇ ನಿಯಮ ಉಲ್ಲಂಘನೆಯಾಗುತ್ತಿಲ್ಲ ಎಂಬಂತೆ ನ್ಯಾಯಾಲಯಕ್ಕೆ ಮಾಹಿತಿ ನೀಡುತ್ತಿದೆ. ಇನ್ನು ಸಚಿವ ಸುಧಾಕರ್ ಖಾಸಗಿ ಈಜುಕೊಳ ಬಳಸಿದ ವಿಚಾರದಲ್ಲಿ ಹಾಗೂ ಚಾಮುಂಡಿ ಬೆಟ್ಟಕ್ಕೆ ಗಣ್ಯರಿಗೆ ಅನುಮತಿ ನೀಡಿದ ವಿಚಾರದಲ್ಲಿ ಸರಕಾರ ನೀಡಿರುವ ಸ್ಪಷ್ಟನೆ ತೃಪ್ತಿಕರವಾಗಿಲ್ಲ. ಹೀಗಾಗಿ ನಿಯಮಗಳ ಕುರಿತು ಸ್ಪಷ್ಟನೆ ನೀಡಬೇಕು. ಕೋವಿಡ್ ಮಾರ್ಗಸೂಚಿಗಳ ಪಾಲನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಬೇಕು. ವಿಶೇಷವಾಗಿ ಧಾರ್ಮಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ನಿಯಮಗಳನ್ನು ಕಡ್ಡಾಯಗೊಳಿಸಿ, ಆಗಾಗ್ಗೆ ಪರಿಶೀಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಅ.6ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News