ಸರಕಾರಿ ಗೌರವದೊಂದಿಗೆ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅಂತ್ಯಕ್ರಿಯೆ

Update: 2020-09-18 13:29 GMT

ರಾಯಚೂರು, ಸೆ.18: ಕೊರೋನದಿಂದ ನಿಧನರಾದ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅವರ ಅಂತ್ಯಸಂಸ್ಕಾರವನ್ನು ರಾಯಚೂರು ನಗರದ ಹೊರವಲಯ ಪೋತ್ಗಲ್ ಸಮೀಪ ಸಕಲ ಸರಕಾರಿ ಗೌರವದೊಂದಿಗೆ ಹಾಗೂ ಸುರಕ್ಷಿತ ಅಂತರ ಕಾಪಾಡಿಕೊಂಡು ಜಿಲ್ಲಾಡಳಿತದಿಂದ ಶುಕ್ರವಾರ ನೆರವೇರಿಸಲಾಯಿತು.

ಮಾರ್ಗಸೂಚಿ ಅನುಸಾರ ಪಿಪಿಇ ಕಿಟ್ ಧರಿಸಿದ್ದ ಆರೋಗ್ಯ ಸಿಬ್ಬಂದಿಗಳು ಆ್ಯಂಬುಲೆನ್ಸ್ ನಿಂದ ಪ್ರಾರ್ಥಿವ ಶರೀರವನ್ನು ಹೊರತಂದು ಕೆಲ ಹೊತ್ತು ಕೆಳಗೆ ಇರಿಸಿದ್ದರು. ಕುಟುಂಬ ಸದಸ್ಯರು ನಿಗದಿತ ದೂರದಿಂದಲೇ ದರ್ಶನ ಮಾಡಲು ಅವಕಾಶ ಕಲ್ಪಿಸಲಾಯಿತು.

ಪಿಪಿಇ ಕಿಟ್ ಧರಿಸಿದ್ದ ಅಶೋಕ್ ಗಸ್ತಿ ಅವರ ಪುತ್ರಿಯರಿಗೆ ಪ್ರಾರ್ಥಿವ ಶರೀರದ ಬಳಿ ಹೋಗಲು ಅವಕಾಶ ನೀಡಲಾಗಿತ್ತು. ಪೊಲೀಸರು ಕುಶಾಲತೋಪು ಹಾರಿಸಿದ ಬಳಿಕ, ಹಿರಿಯ ಪುತ್ರಿ ನೇಹಾ ಅವರು ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ನಿಗದಿತ ದೂರದಲ್ಲಿ ಹಾಜರಿದ್ದರು. ಅಶೋಕ್ ಗಸ್ತಿ ಅವರ ಪತ್ನಿ ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News