ಭಾರೀ ಮಳೆ: ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹ ಭೀತಿ, ಜನರಲ್ಲಿ ಹೆಚ್ಚಿದ ಆತಂಕ

Update: 2020-09-18 15:13 GMT

ಯಾದಗಿರಿ, ಸೆ.18: ಯಾದಗಿರಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ರಸ್ತೆಗಳು ಜಲಾವೃತಗೊಂಡು ಗ್ರಾಮಗಳ ನಡುವಿನ ಸಂಪರ್ಕ ಸಂಪೂರ್ಣವಾಗಿ ಕಡಿದು ಹೋಗಿದೆ. ಇದರಿಂದ, ಪ್ರವಾಹದ ಭೀತಿ ಎದುರಾಗಿದೆ.

ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು, ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ತಲುಪಲು ಪರದಾಡುವಂಥ ಪರಿಸ್ಥಿತಿ ಉದ್ಭವವಾಗಿದೆ. ಜಮೀನುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ನಿಂತಿದ್ದರಿಂದ ನೂರಾರು ಎಕರೆಯಲ್ಲಿ ಬೆಳೆದ ಬೆಳೆಗಳು ನಾಶವಾಗಿವೆ. ಕೆರೆ, ಕಟ್ಟೆಗಳಿಗೆ ಅಪಾರ ಪ್ರಮಾಣದ ನೀರು ಬರುತ್ತಿದೆ. ಇದರಿಂದ, ಕೋಡಿ ಬಿದ್ದು, ನೀರು ಹೊರ ಬರುತ್ತಿವೆ.

ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಮನೆಗಳು ಕುಸಿದು ಬಿದ್ದಿವೆ. ಇದರಿಂದ, ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ದವಸ, ಧಾನ್ಯಗಳು ನೀರು ಪಾಲಾಗಿವೆ. ಅಲ್ಲದೆ, ಹತ್ತಿಕುಣಿ ಜಲಾಶಯದಿಂದ 300 ಕ್ಯುಸೆಕ್ ನೀರು ಹೊರ ಬಿಟ್ಟಿದ್ದರಿಂದ ಚಾಮನಳ್ಳಿಯಿಂದ-ಯಾದಗಿರಿ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಸಾರ್ವಜನಿಕ ಸಂಚಾರ ಸ್ಥಗಿತಗೊಂಡಿದೆ.

ಈ ವರ್ಷ ವಾಡಿಕೆಗಿಂತ ಅತಿಹೆಚ್ಚು ಮಳೆ ಸುರಿದಿದ್ದರಿಂದ ಈಗಾಗಲೇ ಗ್ರಾಮೀಣ ಭಾಗದ ರಸ್ತೆಗಳು ಕೊಚ್ಚಿಹೋಗಿವೆ. ರೈತರ ಬೆಳೆಯೂ ನಷ್ಟವಾಗಿದೆ. ಕೊರೋನ ಸೋಂಕಿನಿಂದ ತತ್ತರಿಸಿರುವ ಗ್ರಾಮೀಣರು ಈಗ ಮಳೆಯಿಂದ ತೊಂದರೆಗೆ ಈಡಾಗಿದ್ದಾರೆ. ಆದರೆ, ಜಿಲ್ಲಾಡಳಿತ ಈ ಎಲ್ಲ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿವೆ. 

ಇನ್ನೂ ಮಳೆ ಸುರಿಯುತ್ತಿರುವುದರಿಂದ ಹತ್ತಿಕುಣಿ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಹೀಗಾಗಿ, ಸುತ್ತಲಿನ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕು.

-ಕೈಲಾಸನಾಥ ಅನ್ವಾರ, ಹತ್ತಿಕುಣಿ ಯೋಜನೆ ಪ್ರಭಾರಿ ಸಹಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News