ಪ್ರಧಾನಿ ಮೋದಿ ಜೊತೆ ಸಿಎಂ ಬಿಎಸ್‍ವೈ ಚರ್ಚೆ: ‘ಕೃಷ್ಣಾ ಮೇಲ್ದಂಡೆ’ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಮನವಿ

Update: 2020-09-18 16:36 GMT
ಫೈಲ್ ಫೋಟೋ

ಹೊಸದಿಲ್ಲಿ, ಸೆ.18: ರಾಜ್ಯದ ನೀರಾವರಿ ಯೋಜನೆಗಳು, ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ನಿಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ವಿವಿಧ ಇಲಾಖೆಯ ಕೇಂದ್ರ ಸಚಿವರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಸರಣಿ ಚರ್ಚೆಗಳನ್ನು ನಡೆಸಿದರು.

ಸಂಸತ್ ಭವನದಲ್ಲಿ ಪ್ರಧಾನಿ ಜೊತೆ 15 ನಿಮಿಷಗಳ ಕಾಲ ಚರ್ಚೆ ನಡೆಸಿದ ಮುಖ್ಯಮಂತ್ರಿ, ಎನ್‍ಡಿಆರ್‍ಎಫ್ ಇಂದ ರಾಜ್ಯಕ್ಕೆ ಬರಬೇಕಿರುವ ಅನುದಾನವನ್ನು ಸಕಾಲದಲ್ಲಿ ಬಿಡುಗಡೆ ಮಾಡುವಂತೆ ಕೋರಿದರು. ಅಲ್ಲದೆ, ಎನ್‍ಡಿಆರ್‍ಎಫ್ ಹಾಗೂ ಎಸ್‍ಡಿಆರ್‍ಎಫ್‍ಗೆ ನಿಯಮಗಳನ್ನು ಪ್ರಸಕ್ತ ಸಾಲಿಗೆ ಅನ್ವಯಿಸುವಂತೆ ಪರಿಷ್ಕರಿಸಿ, ಸಂತ್ರಸ್ತರಿಗೆ ಕಾಲಮಿತಿಯಲ್ಲಿ ನೆರವು ಒದಗಿಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3 ಅನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವಂತೆಯೂ ಪ್ರಧಾನಿಗೆ ಮನವಿ ಮಾಡಿದ ಮುಖ್ಯಮಂತ್ರಿ, ರಾಜ್ಯಕ್ಕೆ ಹಂಚಿಕೆಯಾಗಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮೇಕೆದಾಟು, ಕಳಸಾ ಬಂಡೂರಿ ನಾಲಾ ಯೋಜನೆ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳಿಗೆ ತ್ವರಿತವಾಗಿ ಅನುಮೋದನೆ ನೀಡುವಂತೆ ಕೋರಿದರು.

ನವೆಂಬರ್ 19ರಂದು ವರ್ಚುವಲ್ ವೇದಿಕೆ ಮೂಲಕ ಬೆಂಗಳೂರು ಟೇಕ್ ಸಮ್ಮಿಟ್ ಅನ್ನು ಉದ್ಘಾಟನೆ ಮಾಡುವಂತೆ ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಆಹ್ವಾನಿಸಿದರು.

ಬಳಿಕ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಪ್ರಕಾಶ್ ಜಾವ್ಡೇಕರ್ ಹಾಗೂ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾದ ಮುಖ್ಯಮಂತ್ರಿ, ಮೇಕೆದಾಟು ಯೋಜನೆಗೆ ಸಂಬಂಧಿಸಿದ ಅಗತ್ಯ ಮಂಜೂರಾತಿಗಳನ್ನು ಒದಗಿಸುವಂತೆ ಕೋರಿದರು. ಅಲ್ಲದೆ, ಕಳಸಾ ಬಂಡೂರಿ ನಾಲಾ ಯೋಜನೆಗೆ ಅರಣ್ಯ ಇಲಾಖೆಯಿಂದ ಒಪ್ಪಿಗೆ ನೀಡುವಂತೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3 ಅನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವಂತೆ ಮನವಿ ಮಾಡಿದರು.

ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸಂಸ್ಥೆ ಎದುರಿಸುತ್ತಿರುವ ಸಮಸ್ಯೆಯನ್ನು ಬಗೆಹರಿಸುವಂತೆ ಕೋರಿದರು. ನಗರಾಭಿವೃದ್ಧಿ ಹಾಗೂ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿಯನ್ನು ಭೇಟಿ ಮಾಡಿ, ನಗರ ಸ್ಥಳೀಯ ಸಂಸ್ಥೆಗಳಿಗೆ 295.20 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಮನವಿ ಮಾಡಿದರು.

ಅಲ್ಲದೆ, ಬಳ್ಳಾರಿ, ಕಲಬುರಗಿ, ಮೈಸೂರು ಹಾಗೂ ವಿಜಯಪುರ ಮಹಾನಗರ ಪಾಲಿಕೆಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ತರುವಂತೆ ಕೋರಿದರು. ನಗರಾಭಿವೃದ್ಧಿ ಇಲಾಖೆಯಿಂದ ಬಾಕಿ ಬರಬೇಕಿರುವ 247.75 ಕೋಟಿ ರೂ.ಗಳನ್ನು ಹಾಗು ಇತರ ಯೋಜನೆಗಳ ಅಡಿಯಲ್ಲಿ ಬರಬೇಕಿರುವ 279 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಯಡಿಯೂರಪ್ಪ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News