ಮಳೆಗಾಲದಲ್ಲಿ ಹರಡುತ್ತಿರುವ ಸಾಂಕ್ರಾಮಿಕ ಖಾಯಿಲೆಗಳು: ಸಾಮಾನ್ಯ ಶೀತ, ಜ್ವರ, ಕೆಮ್ಮಿಗೂ ಆತಂಕಪಡುತ್ತಿರುವ ಜನ !

Update: 2020-09-18 16:39 GMT

ಬೆಂಗಳೂರು, ಸೆ.18: ಕೊರೋನ ವೈರಾಣು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿಯೇ ಇದೀಗ ಮಳೆಗಾಲದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಹಲವು ಕಡೆಗಳಲ್ಲಿ ಮತ್ತಷ್ಟು ಸಾಂಕ್ರಾಮಿಕ ಕಾಯಿಲೆಗಳು ಹರಡಲು ಶುರುವಾಗಿದೆ.

ಕೊರೋನ ವ್ಯಾಪಕವಾಗಿರುವುದರಿಂದ ಸಾಮಾನ್ಯ ಶೀತ, ಜ್ವರ, ಕೆಮ್ಮು ಬಂದರೂ ಜನರು ಕೊರೋನ ಬಂದಿದೆಯೇನೋ ಎಂದು ಭಯಪಡುತ್ತಿದ್ದಾರೆ. ಮತ್ತೊಂದು ಕಡೆ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆಗೆ ಮುನ್ನ ಕೊರೋನ ಟೆಸ್ಟ್ ಮಾಡಿಸಬೇಕು ಎಂದು ತಿಳಿಸುತ್ತಿದ್ದಾರೆ. ಆದರೆ, ರೋಗ ಲಕ್ಷಣಗಳಿದ್ದ ಮಾತ್ರಕ್ಕೆ ಕೊರೋನ ಆಗಿರಲ್ಲ. ಹೀಗಾಗಿ, ಜನರು ಅನವಶ್ಯಕ ಆತಂಕಪಡುವ ಅಗತ್ಯವಿಲ್ಲ. ಹಾಗೆಯೇ ನಿರ್ಲಕ್ಷ್ಯ ಮಾಡದೆ ಕಾಳಜಿಯನ್ನೂ ಮಾಡಬೇಕಾಗುತ್ತದೆ. ಕೊರೋನ ನಡುವೆ ಮಳೆಗಾಲದಲ್ಲಿ ಶುರುವಾಗುವ ವೈರಲ್ ಫೀವರ್ ಕಾಣಿಸಿಕೊಳ್ಳುತ್ತದೆ. ಈ ಕುರಿತು ಜನರಿಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ.

ಉದಾಸೀನ ಬೇಡ: ಅನ್‍ಲಾಕ್-4 ನಂತರ ದಿನೇದಿನೇ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕು ಸಮುದಾಯಕ್ಕೆ ಹರಡಿದೆ. ಇಂತಹ ಸಂದರ್ಭದಲ್ಲಿಯೂ ಜನರು ಅನಗತ್ಯವಾಗಿ ಓಡಾಟ, ಮಾಸ್ಕ್ ಧರಿಸದಿರುವುದು ಮಾಡದೇ ಉದಾಸೀನ ತೋರುತ್ತಿದ್ದಾರೆ. ಇದು ಆರೋಗ್ಯಕರವಲ್ಲ ಎಂದು ಇಂಟರ್ನಲ್ ಮೆಡಿಸಿನ್ ಸ್ಪೆಷಲಿಸ್ಟ್ ಡಾ.ಮಂಜುನಾಥ್ ಹೇಳಿದ್ದಾರೆ.

ಕೊರೋನ ಜೊತೆಗೆ ಡೆಂಗ್ಯೂ, ಎಚ್1ಎನ್1, ಟೈಫಾಯಿಡ್ ನಂತರ ವೈರಲ್ ಫೀವರ್ ಹೆಚ್ಚಾಗುತ್ತಿದೆ. ಹೀಗಾಗಿ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು. ವಯಸ್ಕರಲ್ಲಿ ಕಾಣಿಸಿಕೊಂಡರೆ ಶೇ.99ರಷ್ಟು ಗುಣಮುಖರಾಗಿ ಬಿಡುತ್ತಾರೆ. ಆದರೆ, ಅವರಿಂದ ಮಕ್ಕಳಿಗೆ ಹಾಗೂ ಇಳಿವಯಸ್ಸಿನವರಿಗೆ ಬಂದರೆ ಚೇತರಿಕೆ ಕಷ್ಟ ಡಾ.ಕೆ.ಎನ್.ಮಂಜುನಾಥ್ ತಿಳಿಸಿದ್ದಾರೆ.

ಮುಂಗಾರಿನಲ್ಲಿ ಮಕ್ಕಳಲ್ಲಿ ಹಲವು ಸಾಂಕ್ರಾಮಿಕ ಕಾಯಿಲೆಗಳು ಕಾಡಬಹುದು. ಇಂತಹ ಸಂದರ್ಭದಲ್ಲಿ ಹೆಚ್ಚು ಕಾಳಜಿ ಅಗತ್ಯ. ಸ್ವಚ್ಛತೆ ಕಾಪಾಡುವುದು, ಬಿಸಿಯಾದ ಆಹಾರ ಸೇವಿಸುವುದು, ಸೊಳ್ಳೆ ಬಾರದಂತೆ ಕಾಯಿಲ್ ಬಳಸುವುದು, ಪರದೆ ಹಾಕುವುದು, ಹೂ ಕುಂಡದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಎಲ್ಲ ಮಾಡಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಮುಂಜಾಗ್ರತಾ ಕ್ರಮಕ್ಕೆ ಸಿದ್ಧತೆ: ಮುಂಗಾರಿನ ಹಿನ್ನೆಲೆ ಮಲೇರಿಯಾ, ಟೈಫಾಡ್, ಡೆಂಗ್ಯೂ, ಚಿಕ್ಯೂನ್‍ಗುನ್ಯಾ, ಎಚ್1ಎನ್1 ಜ್ವರ ಕಾಡುವ ಹಿನ್ನೆಲೆ ಈಗಾಗಲೇ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ನಿರ್ದೇಶಕ ಡಾ.ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News