ಬೇಡಿಕೆ ಈಡೇರಿಸಲು ರಾಜ್ಯ ಸರಕಾರ ಸಮ್ಮತಿ: ಮುಷ್ಕರ ಕೈ ಬಿಟ್ಟ ವೈದ್ಯರು

Update: 2020-09-18 16:54 GMT

ಬೆಂಗಳೂರು, ಸೆ.18 : ವೇತನ ಪರಿಷ್ಕರಣೆ ಸಂಬಂಧ ಪ್ರತಿಭಟನಾ ನಿರತ ವೈದ್ಯರ ಜತೆ ನಡೆಸಿದ ಸಂದಾನ ಸಭೆ ಯಶಸ್ವಿಯಾಗಿದೆ. ವೈದ್ಯರ ಬೇಡಿಕೆಗಳನ್ನು ಈಡೇರಿಸಲು ಸರಕಾರ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ವೈದ್ಯ ಸಂಘಟನೆಗಳು ಮುಷ್ಕರ ಕೈಬಿಡಲು ನಿರ್ಧರಿಸಿವೆ.

ಸರಕಾರ ಕೂಡಲೇ ವೇತನ ಪರಿಷ್ಕರಣೆ ಮಾಡಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡು ಕಳೆದ ಮೂರು ದಿನಗಳಿಂದ ವೈದ್ಯರು ಅಸಹಕಾರ ಚಳವಳಿ ಆರಂಭಿಸಿದ್ದರು. ಪ್ರತಿಭಟನಾ ನಿರತ ವೈದ್ಯರ ಜೊತೆಗೆ ಆರೋಗ್ಯ ಸಚಿವ ಶ್ರೀರಾಮುಲು ಮಂಗಳವಾರ ಸಭೆ ನಡೆಸಿದ್ದರು. ಆದರೆ ಇದು ಯಶಸ್ವಿ ಆಗಿರಲಿಲ್ಲ. ತಮ್ಮ ಬೇಡಿಕೆ ಈಡೇರದೆ ಇದ್ದರೆ ರಾಜ್ಯಾದ್ಯಂತ ಸೆಪ್ಟಂಬರ್ 21 ರಂದು ಬೆಂಗಳೂರು ಚಲೋ ಜಾಥಾ ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ವೈದ್ಯರು ನೀಡಿದ್ದರು.

ಅಲ್ಲದೆ, ಸೆ. 21 ರಿಂದ ಒಪಿಡಿ ಬಂದ್ ಮಾಡಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದ ವೈದ್ಯರ ಜೊತೆಗೆ ಆರೋಗ್ಯ ಸಚಿವ ಶ್ರೀರಾಮುಲು ಶುಕ್ರವಾರ ಮಾತುಕತೆ ನಡೆಸಿ ವೈದ್ಯರ ಬೇಡಿಕೆಗೆ ಒಪ್ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವೈದ್ಯರು ಮುಷ್ಕರ ಕೈ ಬಿಡಲು ಸಮ್ಮಿತಿಸಿದ್ದಾರೆ.

ವೈದ್ಯರ ವೇತನ ಪರಿಷ್ಕರಣೆ ಬೇಡಿಕೆಗೆ ರಾಜ್ಯ ಸರಕಾರ ಒಪ್ಪಿಗೆ ಸೂಚಿಸಿದರ ಪರಿಣಾಮ ಮುಷ್ಕರ ಕೈಬಿಡಲು ವೈದ್ಯ ಸಂಘಟನೆಗಳು ಒಪ್ಪಿಗೆ ಸೂಚಿಸಿವೆ ಜನಸಾಮಾನ್ಯರ ಹಿತ ಕಾಪಾಡಲು ಸರಕಾರ ಯಾವತ್ತೂ ಬದ್ಧ ಎಂದು ಅರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

ಮುಷ್ಕರವನ್ನು ಕೈಬಿಟ್ಟ ವೈದ್ಯರಿಗೂ ಸರಕಾರದ ಪರವಾಗಿ ಅಭಿನಂದನೆಗಳು. ಕೋವಿಡ್ ಸಂಬಂಧಿತ ಸೇವೆಗಳು ಅಭಾದಿತವಾಗಿ ಮುಂದುವರಿಯಲಿವೆ ಎಂದು ಅವರು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News