ಸೆ.19ರಂದು ರಾಜ್ಯಾದ್ಯಂತ ಮೆಗಾ ಇ ಲೋಕ ಅದಾಲತ್

Update: 2020-09-18 17:05 GMT

ಬೆಂಗಳೂರು, ಸೆ.18: ಕರ್ನಾಟಕದ ನ್ಯಾಯಾಂಗ ಇತಿಹಾಸದಲ್ಲಿ ಮೊದಲ ಬಾರಿಗೆ ಮೆಗಾ ಇ ಲೋಕ ಅದಾಲತ್‍ಗೆ ವೇದಿಕೆ ಸಿದ್ಧಗೊಂಡಿದ್ದು, ನಾಳೆ(ಸೆ.19) ರಾಜ್ಯಾದ್ಯಂತ ನಡೆಯಲಿದೆ. ಈ ಅದಾಲತ್‍ನಲ್ಲಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ವೇದಿಕೆ ಸಿಗಲಿದೆ.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಈ ಕ್ರಮ ಕೈಗೊಂಡಿದ್ದು, ರಾಜ್ಯದ ಹೈಕೋರ್ಟ್ ಪೀಠಗಳು, ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಒಂದೇ ದಿನ ಏಕಕಾಲಕ್ಕೆ 1,100 ಕೋರ್ಟ್ ಗಳಲ್ಲಿ ಇ-ಲೋಕ ಅದಾಲತ್ ನಡೆಯಲಿದೆ. ಅದರಲ್ಲಿ 1,100 ನ್ಯಾಯಾಧೀಶರು ವ್ಯಾಜ್ಯಗಳನ್ನು ಇತ್ಯರ್ಥಪಡಿಸಲಿದ್ದಾರೆ.

ಇದರಲ್ಲಿ ವಾದಿ-ಪ್ರತಿವಾದಿಗಳು ಮತ್ತು ವಕೀಲರು ತಮ್ಮ ಕಚೇರಿಯಿಂದ ಅಥವಾ ಮನೆಯಿಂದ ಮೊಬೈಲ್ ಅಥವಾ ಇನ್ನಿತರ ವಿದ್ಯುನ್ಮಾನ ಯಂತ್ರಗಳ ಮೂಲಕ ಭಾಗವಹಿಸಬಹುದು. ಇದರ ತಾಂತ್ರಿಕ ಮಾಹಿತಿಗಳನ್ನು ಅವರಿಗೆ ಮೊದಲೇ ಕಳುಹಿಸಿ ಕೊಡಲಾಗುತ್ತದೆ.

ಇ ಅದಾಲತ್‍ನಲ್ಲಿ ಪ್ರಮುಖವಾಗಿ ನ್ಯಾಯಾಲಯಗಳಲ್ಲಿ ದಾಖಲಾಗದ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ಮತ್ತು ಜನತಾ ನ್ಯಾಯಾಲಯಕ್ಕೆ ಕಳುಹಿಸಲ್ಪಟ್ಟ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಲು ಅವಕಾಶವಿರುತ್ತದೆ. ಆದರೆ, ಯಾವ ಪ್ರಕರಣ ಲೋಕ ಅದಾಲತ್‍ಗೆ ಬರಬೇಕು ಎಂದು ನ್ಯಾಯಾಧೀಶರು ತೀರ್ಮಾನ ಮಾಡುತ್ತಾರೆ. ಇದಕ್ಕೆ ಯಾವುದೇ ಶುಲ್ಕವಿರುವುದಿಲ್ಲ. ಪಾವತಿ ಮಾಡಿದರೂ, ಅದಾಲತ್‍ನಲ್ಲಿ ಪ್ರಕರಣ ಇತ್ಯರ್ಥವಾದರೆ ಶುಲ್ಕ ವಾಪಸ್ ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News