ಪರಿಷ್ಕೃತ ಮಹಿಷಿ ವರದಿಯನ್ನು ಸದನದಲ್ಲಿ ಮಂಡಿಸಲು ಆಗ್ರಹಿಸಿ ಸಿಎಂ, ವಿಪಕ್ಷ ನಾಯಕರಿಗೆ ಪತ್ರ

Update: 2020-09-18 17:08 GMT

ಬೆಂಗಳೂರು, ಸೆ.18: ಖಾಸಗಿ ವಲಯದಲ್ಲಿನ ನೇಮಕಾತಿಗಳಲ್ಲಿ ಸ್ಥಳೀಯರಿಗೆ(ಕನ್ನಡಿಗರಿಗೆ) ನ್ಯಾಯಯುತ ಪಾಲು ದೊರೆಯಲು, ಕನ್ನಡಿಗರ ಉದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಸಲುವಾಗಿ ಪರಿಷ್ಕೃತ ಮಹಿಷಿ ವರದಿಯನ್ನು ಸದನದಲ್ಲಿ ಮಂಡಿಸಿ, ಕಾಯ್ದೆ ರೂಪಿಸಬೇಕು ಎಂದು ಕನ್ನಡ ಗೆಳೆಯರ ಬಳಗ ಆಡಳಿತ ಮತ್ತು ವಿಪಕ್ಷ ನಾಯಕರುಗಳನ್ನು ಆಗ್ರಹಿಸಿದೆ.

ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿಗೆ ಪತ್ರ ಬರೆದಿರುವ ಬಳಗವು, ಇಂದಿನ ಕಾಲ ಮಾನಕ್ಕೆ ಹೊಂದುವ ರೀತಿಯಲ್ಲಿ ಮಹಿಷಿ ವರದಿಯನ್ನು ಪರಿಷ್ಕರಿಸಲು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಕನ್ನಡ ಅಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ.

ಆ ಸಮಿತಿಯು ಪರಿಷ್ಕರಿಸಿ ಐ.ಟಿ/ಬಿ.ಟಿ ಸೇರಿದಂತೆ ಎಲ್ಲ ಹೊಸ ಕ್ಷೇತ್ರಗಳನ್ನು ಪರಿಗಣಿಸಿ ‘ಪರಿಷ್ಕೃತ ಮಹಿಷಿ ವರದಿಯನ್ನು 2017ರಲ್ಲಿ ಮುಖ್ಯಮಂತ್ರ್ರಿಗಳಿಗೆ ಸಲ್ಲಿಸಿದೆ. ಪರಿಷ್ಕೃತ ವರದಿಯನ್ನು ಸಲ್ಲಿಸಿ 3 ವರ್ಷಗಳಾದರು ಅದನ್ನು ಅನುಷ್ಠಾನಗೊಳಿಸಲು ಅಗತ್ಯವಾದ ಕಾನೂನು ಪ್ರಕ್ರಿಯೆಯೇ ಆರಂಭವಾಗಿಲ್ಲ. ಹಾಗಾಗಿ ಕನ್ನಡಿಗರಿಗೆ ಸಿಗಬೇಕಾದ ಪಾಲು ಸಿಗುತ್ತಿಲ್ಲ ಎಂದು ಬಳಗದ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಆಂಧ್ರ ಪ್ರದೇಶದ ವಿಧಾನಸಭೆಯು ‘ಆಂಧ್ರಪ್ರದೇಶ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ಕಲ್ಪಿಸುವ ಕಾಯ್ದೆ- 2019’ ರೂಪಿಸಿ ಒಂದು ವರ್ಷವಾಯಿತು. ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರಕಾರವು ಉದ್ಯೋಗದಲ್ಲಿ ಶೇ.80ರಷ್ಟು ಸ್ಥಳೀಯರಿಗೆ ಮೀಸಲು ಸಂಬಂಧ ಸದನದಲ್ಲಿ ಮಂಡಿಸಲು ಕಾಯಿದೆ ಕರಡು ರೂಪಿಸಿದೆ. ಈಗ ಸರಕಾರಿ ನೌಕರಿಯಲ್ಲಿ ಶೇ.100 ಸ್ಥಳೀಯರಿಗೆ ಮೀಸಲಿಡುವ ಮಹತ್ವದ ತೀರ್ಮಾನವನ್ನು ಮಧ್ಯಪ್ರದೇಶ ಸರಕಾರ ತೆಗೆದು ಕೊಂಡಿದೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

ಕರ್ನಾಟಕ ಸರಕಾರವು ‘ಕರ್ನಾಟಕ ನೂತನ ಕೈಗಾರಿಕಾ ನೀತಿ 2020-25’ರಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಬಗ್ಗೆ ಷರತ್ತು ವಿಧಿಸಿರುವುದು ಸ್ವಾಗತಾರ್ಹ. ಈ ಷರತ್ತಿನಿಂದ ಹೊಸದಾಗಿ ಸ್ಥಾಪನೆಯಾಗುವ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಕೆಲಸ ಸಿಗುವ ಸಾಧ್ಯತೆಯಿದೆ. ಆದರೆ, ರಾಜ್ಯದಲ್ಲಿರುವ ಕೇಂದ್ರ ಸ್ವಾಮ್ಯದ ಮತ್ತು ಖಾಸಗಿ ಉದ್ದಿಮೆ/ ಸಂಸ್ಥೆ /ಬ್ಯಾಂಕ್/ ಕೈಗಾರಿಕೆ/ ಕಛೇರಿಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ(ಸ್ಥಳೀಯರಿಗೆ) ಮಹಿಷಿ ವರದಿಯಲ್ಲಿ ಸೂಚಿಸಿರುವ ಪ್ರಮಾಣದಲ್ಲಿ ಉದ್ಯೋಗ ಸಿಗುತ್ತಿಲ್ಲ. ಹೀಗಾಗಿ, ಪರಿಷ್ಕೃತ ಮಹಿಷಿ ವರದಿಯನ್ನು ಅಧಿವೇಶದಲ್ಲಿ ಮಂಡಿಸಿ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಬಳಗದಿಂದ ಆಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News