ಕೋವಿಡ್ ಸೇವಾವಧಿಯಲ್ಲಿ ಮೃತರಾದ ವೈದ್ಯರ, ಸಿಬ್ಬಂದಿಗಳ ಕುಟುಂಬಕ್ಕೆ ಪರಿಹಾರ ಒದಗಿಸಲು ಒತ್ತಾಯ

Update: 2020-09-18 17:08 GMT

ಬೆಂಗಳೂರು, ಸೆ.18: ಕೋವಿಡ್-19ರ ಕಾರ್ಯದ ವೇಳೆ ಸಾವನ್ನಪ್ಪಿದ ವೈದ್ಯರ ಕುಟುಂಬಗಳಿಗೆ ಕೂಡಲೇ ಪರಿಹಾರ ನೀಡಬೇಕು. ಹಾಗೂ ಸೇವೆಯಲ್ಲಿ ನಿರತರಾಗಿರುವ ವೈದ್ಯರಿಗೆ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ವೈದ್ಯಕೀಯ ಮತ್ತು ದಂತ ವಿದ್ಯಾರ್ಥಿಗಳ ವೇದಿಕೆ ಒತ್ತಾಯಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ವೇದಿಕೆ, ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವರು ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡುತ್ತಾ ವೈದ್ಯರು, ದಾದಿಯರು ಹಾಗೂ ಆಶಾ ಕಾರ್ಯಕರ್ತೆಯರನ್ನು ಒಳಗೊಂಡಂತೆ ಆರೋಗ್ಯ ಕಾರ್ಯಕರ್ತೆಯರ ಸಾವಿನ ಸಂಖ್ಯೆಯ ಅಂಕಿ ಅಂಶಗಳ ವರದಿ ಮತ್ತು ಈ ಸಾಂಕ್ರಾಮಿಕ ಸಂದರ್ಭದಲ್ಲಿ ಭಾದಿತರಾದ ಅಂಕಿಅಂಶಗಳು ತಮ್ಮ ಬಳಿ ಇಲ್ಲವೆಂದು ಹೇಳಿದ್ದಾರೆ. ಇದು ಸರಕಾರದ ಬೇಜವಾಬ್ದಾರಿತನಕ್ಕೆ ಸಾಕ್ಷಿಯೆಂದು ಖಂಡಿಸಿದೆ.

ವೈದ್ಯರು, ನರ್ಸ್ ಗಳು, ಆಶಾ ಕಾರ್ಯಕರ್ತೆಯರು ಸಮಾಜದ ಆರೋಗ್ಯಕ್ಕಾಗಿ ತಮ್ಮ ಜೀವವನ್ನು ಪಣಕ್ಕಿಟ್ಟು ಮತ್ತು ಕಳೆದ ಹಲವು ತಿಂಗಳಿನಿಂದ ಸಂಬಳವನ್ನು ಪಡೆಯದೇ ಕೆಲಸ ಮಾಡುತ್ತಿದ್ದಾರೆ. ಭಾರತೀಯ ವೈದ್ಯಕೀಯ ಮಂಡಳಿಯು ಇಲ್ಲಿಯತನಕ 382 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ವರದಿ ಸಲ್ಲಿಸಿದೆ. ಕರ್ನಾಟಕದಲ್ಲಿ ಸುಮಾರು 50ಮಂದಿ ವೈದ್ಯರು ಸಾವನ್ನಪ್ಪಿದ್ದಾರೆ. ಸತ್ತವರ ಕುಟುಂಬಗಳು ಇಂದಿಗೂ ಪರಿಹಾರವನ್ನು ಪಡೆದಿಲ್ಲ.

ವೈದ್ಯರೊಂದಿಗೆ ದೊಡ್ಡ ಸಂಖ್ಯೆಯ ನರ್ಸ್ ಗಳು, ಆಶಾ ಕಾರ್ಯಕರ್ತೆಯರು ಹಾಗೂ ಇನ್ನಿತರ ಆರೋಗ್ಯ ಕ್ಷೇತ್ರದಲ್ಲಿರುವ ಕಾರ್ಮಿಕರು ತಮ್ಮ ಜೀವವನ್ನು ತ್ಯಾಗ ಮಾಡಿದ್ದಾರೆ. ಈ ದಾಖಲೆಗಳನ್ನು ಸರಕಾರ ಬಹಿರಂಗ ಪಡಿಸಿಲ್ಲ. ಕೊರೋನ ವಿರುದ್ದದ ಹೋರಾಟದ ಮುಂಚೂಣಿಯಲ್ಲಿರುವ ವಾರಿಯರ್ಸ್ ಗಳಿಗೆ ಕೇಂದ್ರ ಸರಕಾರ ತೋರುತ್ತಿರುವ ಗೌರವ ಇದೇನಾ ಎಂದು ವೇದಿಕೆ ಪ್ರಶ್ನಿಸಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರ ಕೊರೋನ ಪ್ರಾರಂಭದ ದಿನಗಳಲ್ಲಿ ವೈದ್ಯರಿಗೆ ಹೂ ಮತ್ತು ಚಪ್ಪಾಳೆ ತಟ್ಟಿ ತನ್ನ ನೈಜ ಕರ್ತವ್ಯವನ್ನು ಮರೆತದ್ದು ಖಂಡನಾರ್ಹ. ಸರಕಾರದ ಈ ನಡವಳಿಕೆಯನ್ನು ವಿರೋಧಿಸಿ ಜೀವ ಕಳೆದುಕೊಂಡ ವೈದ್ಯರ ಕುಟುಂಬಗಳಿಗೆ ಕೂಡಲೇ ಪರಿಹಾರ ಮತ್ತು ವೈದ್ಯರಿಗೆ ಭದ್ರತೆ ಒದಗಿಸಬೇಕೆಂದು ವೈದ್ಯರು ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ವೈಟ್ ಸ್ಪಾಕ್ರ್ಸ್ ಬೆಂಬಲಿಸುತ್ತದೆ. ಹಾಗೂ ವೈದ್ಯರ ಬೇಡಿಕೆಗಳಿಗೆ ಸರಕಾರ ಕೂಡಲೇ ಸ್ಪಂದಿಸಬೇಕೆಂದು ವೇದಿಕೆಯ ರಾಜ್ಯ ಸಂಚಾಲಕ ಹನುಮಂತ ಪ್ರಕಟನೆಯ ಮೂಲಕ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News