‘ಮನೆಹಾನಿ’ ಡಾಟಾ ಎಂಟ್ರಿ ಕಾರ್ಯ ಪೂರ್ಣಗೊಳಿಸಲು ಬೆಳಗಾವಿ ಜಿಲ್ಲಾಧಿಕಾರಿ ಸೂಚನೆ

Update: 2020-09-18 17:40 GMT

ಬೆಳಗಾವಿ, ಸೆ.18: ಪ್ರವಾಹ ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸೆ.31 ರೊಳಗೆ ಡಾಟಾ ಎಂಟ್ರಿ ಕಾರ್ಯವನ್ನು ಮುಗಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ ನೀಡಿದ್ದಾರೆ.

ಬೈಲಹೊಂಗಲ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಬೈಲಹೊಂಗಲ ಉಪವಿಭಾಗದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೈಲಹೊಂಗಲದಲ್ಲಿ 2020-21ನೇ ಸಾಲಿನಲ್ಲಿ ಒಟ್ಟು 133 ‘ಎ’ ವರ್ಗದ, 17 ‘ಬಿ’ ವರ್ಗದ ಹಾಗೂ 1230 ‘ಸಿ’ ವರ್ಗದ ಹೀಗೆ ಒಟ್ಟು 1480 ಮನೆಗಳ ಹಾನಿಯಾಗಿದ್ದು, ಅವುಗಳ ಪೈಕಿ ಶೇ.70ರಷ್ಟು ಹಾನಿಯ ಸರ್ವೇ ಕಾರ್ಯವು ಮುಕ್ತಾಯಗೊಂಡಿದೆ. ಇನ್ನುಳಿದ ಶೇ.30ರಷ್ಟು ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.

ಜೀವಹಾನಿ ಹಾಗೂ ಜಾನುವಾರು ಹಾನಿ ಹಾಗೂ ಬೆಳೆ ಹಾನಿಯನ್ನು ಪರಿಶೀಲಿಸಿ ಬೆಳೆ ಹಾನಿಯ ಕಾರ್ಯವನ್ನು ಸೆ.21 ರೊಳಗಾಗಿ ಪೂರ್ಣಗೊಳಿಸಬೇಕು. ಬೈಲಹೊಂಗಲ ವಿಭಾಗದ 6 ತಾಲೂಕುಗಳ ಪೈಕಿ ಪಹಣಿ ಪ್ರಗತಿ ಪರಿಶೀಲಿಸಿ ಪಹಣಿಯಲ್ಲಿ ಉಪವಿಭಾಗದಲ್ಲಿ ಬಾಕಿ ಇರುವ 95146 ಪ್ರಕರಣಗಳನ್ನು ತಾಲೂಕುವಾರು ಅವಧಿಯನ್ನು ನಿಗದಿಪಡಿಸಿ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಅವರು ತಿಳಿಸಿದರು.

ಬೈಲಹೊಂಗಲ ಉಪವಿಭಾಗದಲ್ಲಿ 498 ಗ್ರಾಮಗಳ ಪೈಕಿ 337 ಗ್ರಾಮಗಳಲ್ಲಿ ಸ್ಮಶಾನ ಭೂಮಿ ಹೊಂದಿದ್ದು, ಇನ್ನುಳಿದ 161 ಗ್ರಾಮಗಳಲ್ಲಿ ಸರಕಾರಿ ಜಮೀನು ಲಭ್ಯವಿದ್ದಲ್ಲಿ, ಸ್ಮಶಾನ ಭೂಮಿಗೆ ಪೂರೈಸಲು ಅಥವಾ ಲಭ್ಯವಿಲ್ಲದೆ ಇದ್ದಲ್ಲಿ ಖಾಸಗಿ ಜಮೀನು ಖರೀದಿ ಮಾಡಿ ನೀಡಲು ಖಾಸಗಿ ಜಮೀನಿನ ಮಾಲಕರು ಮುಂದೆ ಬಂದಲ್ಲಿ ನೇರ ಖರೀದಿ ಪ್ರಸ್ತಾವನೆ ಸಲ್ಲಿಸಲು ಅವರು ನಿರ್ದೇಶನ ನೀಡಿದರು.

ನಂತರ ಸಾಮಾಜಿಕ ಭದ್ರತೆಯಡಿ ನೀಡಲಾಗುವ ವಿವಿಧ ಪಿಂಚಣಿಗಳ ಆಧಾರ್ ಸೀಡಿಂಗ್ ಕುರಿತು ಕ್ರಮ ಜರುಗಿಸಲು ಹಾಗೂ ಅದರಲ್ಲಿ ಸಮಸ್ಯೆಗಳಿದ್ದಲ್ಲಿ ಸದರಿ ಸಮಸ್ಯೆಗಳ ಯಾದಿಯನ್ನು ಗ್ರಾಮವಾರು ತಯಾರಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಉಪ ವಿಭಾಗಾಧಿಕಾರಿಗಳಾದ ಶಿವಾನಂದ ಭಜಂತ್ರಿ ಸೇರಿದಂತೆ ಎಲ್ಲ ತಾಲೂಕುಗಳ ತಹಶೀಲ್ದಾರರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News