ಧಾರವಾಡ: ಅ.25ರೊಳಗೆ ‘ನೀರಿನಾಸರೆಗಳ ಗಣತಿ’ ಕಾರ್ಯ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ

Update: 2020-09-18 17:41 GMT

ಧಾರವಾಡ, ಸೆ.18: ಕೇಂದ್ರ ಸರಕಾರದ ಜಲಸಂಪನ್ಮೂಲ ಇಲಾಖೆಯು ರಾಜ್ಯದ ಜಲಸಂಪನ್ಮೂಲ ಇಲಾಖೆಯ ಸಹಯೋಗದೊಂದಿಗೆ ಸಣ್ಣ ನೀರಾವರಿ ಅಂಕಿ ಅಂಶಗಳ ಸಮನ್ವಯೀಕರಣಕ್ಕಾಗಿ ಸಣ್ಣ ನೀರಾವರಿ ಗಣತಿ ನಡೆಸುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದರು.

ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ನೀರಿನಾಸರೆಗಳ ಗಣತಿ ಕುರಿತ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೀರಿನ ಆಸರೆಗಳಾದ ಕಡಲು, ಮಹಾಸಾಗರ, ಕಾಲುವೆ, ತೊರೆ, ಕೆರೆ, ಕುಂಟೆಗಳನ್ನು ಸಮೀಕ್ಷೆ ಮಾಡಲು ಜಿಲ್ಲೆಯ ಸಣ್ಣನೀರಾವರಿ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತಿತರ ಸಂಬಂಧಿತ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗೆ ಸೆ.23ರಿಂದ 25ರವರೆಗೆ ತಾಲೂಕುವಾರು ತರಬೇತಿ ಆಯೋಜಿಸಲಾಗುವುದು. ಅ.25ರೊಳಗೆ ಗಣತಿಯ ಸಮಗ್ರ ವರದಿ ನೀಡಬೇಕೆಂದು ಹೇಳಿದರು.

ಎಲ್ಲ ತಾಲೂಕುಗಳ ತಹಶೀಲ್ದಾರರು ತಮ್ಮ ವ್ಯಾಪ್ತಿಯ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗೆ ತರಬೇತಿ ಆಯೋಜಿಸಬೇಕು. ಸಾಂಖ್ಯಿಕ ಸಂಗ್ರಹಣಾ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ. ಸೆ.23 ರಂದು ಹುಬ್ಬಳ್ಳಿ-ಧಾರವಾಡ, ಸೆ.24 ರಂದು ನವಲಗುಂದ-ಅಣ್ಣಿಗೇರಿ, ಸೆ.25 ರಂದು ಕಲಘಟಗಿ ತಾಲೂಕುಗಳಲ್ಲಿ ತರಬೇತಿ ಕಾರ್ಯಕ್ರಮಗಳು ಜರುಗಲಿವೆ. ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಹೆಸ್ಕಾಂ, ಪೌರಾಡಳಿತ, ನಗರಾಭಿವೃದ್ಧಿ, ಗ್ರಾಮೀಣ ಕುಡಿಯುವ ನೀರು, ಅಂತರ್ಜಲ ಅಭಿವೃದ್ಧಿ, ಪಂಚಾಯತರಾಜ್ ಇಂಜಿನಿಯರಿಂಗ್ ವಿಭಾಗ, ಸಣ್ಣ ನೀರಾವರಿ ಮತ್ತಿತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ತರಬೇತಿ ಪಡೆದು, ಗಣತಿ ಕಾರ್ಯ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಪಂಚಾಯತರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಮನೋಹರ ಮಂಡೋಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲೆಯ ಎಲ್ಲ ತಹಶೀಲ್ದಾರರು ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News