ಚಿಕ್ಕಮಗಳೂರು: ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ

Update: 2020-09-20 13:09 GMT

ಚಿಕ್ಕಮಗಳೂರು, ಸೆ.20: ಜಿಲ್ಲಾದ್ಯಂತ ಶನಿವಾರ ಸಂಜೆಯಿಂದ ಆರಂಭವಾದ ಧಾರಾಕಾರ ಮಳೆಗೆ ತುಂಗಾ, ಭದ್ರಾ, ಹೇಮಾವತಿ ನದಿ ತುಂಬಿ ಹರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಾದ ಮೂಡಿಗೆರೆ, ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ಸುತ್ತಮುತ್ತ ಶನಿವಾರ ರತ್ರಿಯಿಂದ ರವಿವಾರ ಇಡೀ ದಿನ ಭಾರೀ ಮಳೆಯಾಗುತ್ತಿದ್ದು, ಇಲ್ಲಿನ ಪ್ರಮುಖ ನದಿಗಳೂ ಸೇರಿದಂತೆ ಹಳ್ಳಕೊಳ್ಳಗಳಲ್ಲಿ ನೀರಿನ ಹರಿವಿನ ಮಟ್ಟದಲ್ಲಿ ಏರಿಕೆಯಾಗಿದೆ. ಮಳೆ ಮುಂದುವರಿದಲ್ಲಿ ನದಿ ಪಾತ್ರದ ಮನೆ, ಜಮೀನುಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ.

ಮೂಡಿಗೆರೆ ತಾಲೂಕು ಬಣಕಲ್, ಕೊಗಿಲೆ, ದೇವರಮನೆ, ಕೊಟ್ಟಿಗೆಹಾರ, ಮೂಲರಹಳ್ಳಿ, ಬಾಳೂರು, ಚಾರ್ಮಾಡಿಘಾಟಿ ಪ್ರದೇಶದಲ್ಲಿ ನಿರಂರತವಾಗಿ ಬಾರೀ ಮಳೆಯಾಗುತ್ತಿದೆ. ಕಳಸ ಹಾಗೂ ಕುದುರೆಮುಖ ಭಾಗದಲ್ಲಿ ಬಾರೀ ಪ್ರಮಾಣದ ಮಳೆಯಾಗುತ್ತಿದ್ದು, ತುಂಗಾ, ಭದ್ರಾ, ಹೇಮಾವತಿ ನದಿನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಭದ್ರಾನದಿಯ ನೀರಿನ ಮಟ್ಟ ಹೆಚ್ಚಿದ್ದು, ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗಿದೆ. ಸೇತುವೆ ಮೇಲೆ ಎರಡು ಅಡಿಗಳಷ್ಟು ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ.

ಶನಿವಾರದಿಂದ ಸುರಿಯುತ್ತಿರುವ ಮಳೆಗೆ ಭದ್ರಾನದಿ ತುಂಬಿ ಹರಿಯುತ್ತಿದ್ದು, ಇದೇ ರೀತಿ ಮಳೆ ಮುಂದುವರೆದರೇ, ನದಿಪಾತ್ರದ ಮನೆಗಳಿಗೆ, ಅಡಿಕೆ ತೋಟ, ಕಾಫಿತೋಟ, ಬತ್ತದ ಗದ್ದೆಗಳಿಗೆ ನೀರು ನುಗ್ಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಜನರಲ್ಲಿ ಆತಂಕ ಎದುರಾಗಿದೆ. ಶೃಂಗೇರಿ ತಾಲೂಕು ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ತುಂಗಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಪ್ರವಾಹದ ಭೀತಿ ಎದುರಾಗಿದೆ. ಕೊಪ್ಪ, ನರಸಿಂಹರಾಜಪುರ ತಾಲೂಕು ಸುತ್ತಮುತ್ತಲ ಬಾರೀ ಮಳೆಯಾಗುತ್ತಿದೆ. ಕೊಪ್ಪ ತಾಲೂಕಿನ ಜಯಪುರ ಭಾದಲ್ಲಿ ಭಾರೀ ಮಳೆಗೆ ಜಯಪುರ ಪಟ್ಟಣದಲ್ಲಿ ಅಂಗಡಿ ಮಳಿಗೆಯ ಗೋಡೆ ಕುಸಿದಿದೆ. 

ಚಿಕ್ಕಮಗಳೂರು ತಾಲೂಕು ಸುತ್ತಮುತ್ತ ಶನಿವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ರವಿವಾರ ಬೆಳಗಿನಿಂದ ಸಂಜೆವರೆಗೆ ಸಾಧಾರಣ ಮಳೆಯಾಗಿದ್ದು, ಮಧ್ಯಾಹ್ನದಿಂದ ಸಂಜೆವರೆಗೆ ಧಾರಾಕಾರ ಮಳೆಯಾಗಿದೆ. ಇನ್ನು ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲೂ ರವಿವಾರ ಬೆಳಗ್ಗೆ, ಮಧ್ಯಾಹ್ನ, ಸಂಜೆ ಭಾರೀ ಮಳೆಯಾಗುತ್ತಿದೆ. ತರೀಕೆರೆ ತಾಲೂಕಿನ ಕೆಮ್ಮಣಗುಂಡಿ ಭಾಗದಲ್ಲಿ ಎಡಬಿಡದೆ ಮಳೆಯಾಗುತ್ತಿದ್ದು, ಕಲ್ಲತ್ತಗಿರಿ ಜಲಪಾತ ಉಕ್ಕಿ ಹರಿಯುತ್ತಿದೆ. 

ಬಾರೀ ಮಳೆಗೆ ಮೂಡಿಗೆರೆ ತಾಲ್ಲೂಕು ಬೆಟ್ಟಗೆರೆ ವ್ಯಾಪ್ತಿಯ ಹೊರಟ್ಟಿಯಲ್ಲಿ ಕೊರಗಪ್ಪ ಪೂಜಾರಿ ಎಂಬುವರ ಮನೆ ಗೋಡೆ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಶನಿವಾರದಿಂದ ಜಿಲ್ಲಾದ್ಯಂತ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ರವಿವಾರ ಮಧ್ಯಾಹ್ನದ ನಂತರ ಮಳೆ ಸ್ವಲ್ಪಮಟ್ಟಿಗೆ ವಿರಾಮ ನೀಡಿದ್ದರು ಅಲ್ಲಲ್ಲೀ ಮಳೆಯಾಗುತ್ತಿದೆ. ಕಳಸ, ಕೊಟ್ಟಿಗೆಹಾರ, ಕುದುರೆಮುಖ ಭಾಗದಲ್ಲಿ ಶನಿವಾರ ರಾತ್ರಿ ಸುರಿಯಲಾರಂಭಿಸಿದ ಧಾರಾಕಾರ ಮಳೆ ರವಿವಾರವೂ ಮುಂದುವರಿಯಿತು.

ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ಚಾರ್ಮಾಡಿಘಾಟಿ ಪ್ರದೇಶದಲ್ಲಿ ನಿರಂತರವಾಗಿ ಬಾರೀ ಮಳೆಯಾಗುತ್ತಿದ್ದು, ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಮತ್ತೊಂದೆಡೆ ಭಾರೀ ಮಳೆಗೆ ಚಾರ್ಮಾಡಿ ರಸ್ತೆಯುದ್ದಕ್ಕೂ ಝರಿಜಲಪಾತಗಳು ಧುಮ್ಮಿಕ್ಕುತ್ತಿದ್ದು, ವಾರದ ಕೊನೆಯಾಗಿರುವುದರಿಂದ ಭಾರೀ ಮಳೆ ಸೇರಿದಂತೆ ಹಲವೆಡೆ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿದ್ದರೂ ಚಾರ್ಮಾಡಿ ಘಾಟ್‍ನಲ್ಲಿ ಪ್ರವಾಸಿಗರು ಜಲಪಾತ ವೀಕ್ಷಣೆಗೆ ಮುಗಿಬಿದ್ದಿದ್ದಾರೆ.

ಜಿಲ್ಲೆಯಲ್ಲಿ ರೆಡ್ ಅಲರ್ಟ್: ಎರಡು ದಿನಗಳು ಜಿಲ್ಲೆಯಲ್ಲಿ ಬಾರೀ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ರವಿವಾರ ಸೋಮವಾರ ಎರಡುದಿನಗಳವರೆಗೆ ಜಿಲ್ಲಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಪ್ರವಾಹ ಎದುರಾದಲ್ಲಿ ಪ್ರವಾಹವನ್ನು ನಿಭಾಯಿಸಲು ಸಕಲ ಸಿದ್ಧತೆಯನ್ನು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News