ಭಾಗಮಂಡಲದಲ್ಲಿ ದಾಖಲೆಯ ಮಳೆ

Update: 2020-09-20 13:33 GMT

ಮಡಿಕೇರಿ,ಸೆ.20 : ಕೊಡಗು ಜಿಲ್ಲೆಯಲ್ಲಿ ಮಳೆಯ ತೀವ್ರತೆ ಮುಂದುವರೆದಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. . ಕಾವೇರಿ ಮತ್ತು ಉಪನದಿಗಳು ತುಂಬಿ ಹರಿಯುತ್ತಿರುವುದರಿಂದ ಕುಶಾಲನಗರ ವ್ಯಾಪ್ತಿಯಲ್ಲಿ ನದಿಯ ನೀರು 14 ಅಡಿಗಳಷ್ಟು ಏರಿಕೆಯಾಗಿದೆ. ದಕ್ಷಿಣ ಕೊಡಗಿನ ವಿವಧೆಡೆ ಧಾರಾಕಾರವಾಗಿ ಮಳೆಯಾಗುತ್ತಿರುವುದರಿಂದ ಕಾಫಿ ತೋಟಗಳು ಕೊಳೆ ರೋಗದ ಆತಂಕವನ್ನು ಎದುರಿಸುತ್ತಿವೆ. 

ನಿರಂತರವಾಗಿ ಸುರಿಯುತ್ತಿರುವ ಮಳೆ ಮಡಿಕೇರಿಯ ಎತ್ತರದ ಪ್ರದೇಶದ ನಿವಾಸಿಗಳಲ್ಲಿ ಭೀತಿ ಮೂಡಿಸಿದೆ. ಮಡಿಕೇರಿ ನಗರದಲ್ಲಿ ಮೈಕೊರೆಯುವ ಚಳಿ ಮತ್ತು ಮಂಜು ಮುಸುಕಿದ ವಾತಾವರಣದೊಂದಿಗೆ ಮಳೆ ಸುರಿಯುತ್ತಿದೆ. ಜಿಲ್ಲೆಯಾದ್ಯಂತ ಮಳೆ ಮತ್ತಷ್ಟು ತೀವ್ರತೆಯನ್ನು ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.  

ಭಾಗಮಂಡಲದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 7 ಇಂಚು ಮಳೆಯಾಗಿದೆ. ಸಂಪಾಜೆ 6.5 ಮತ್ತು ಮಡಿಕೇರಿಯಲ್ಲಿ 4 ಇಂಚು ಮಳೆ ಸುರಿದಿದೆ. ವಿರಾಜಪೇಟೆ 3, ಹುದಿಕೇರಿ 2.5, ಶ್ರೀಮಂಗಲ 2, ಪೊನ್ನಂಪೇಟೆ 1, ಅಮ್ಮತ್ತಿ 2, ಬಾಳೆಲೆ 1, ಸೋಮವಾರಪೇಟೆ 1.5, ಶಾಂತಳ್ಳಿ 3, ಕೊಡ್ಲಿಪೇಟೆ 1, ಕುಶಾಲನಗರ 1, ಸುಂಟಿಕೊಪ್ಪ 2 ಇಂಚು ಮಳೆಯಾಗಿದೆ.

ಹಾರಂಗಿ ಜಲಾಶಯದ ಇಂದಿನ ನೀರಿನ ಹೊರ ಹರಿವು 5837 ಕ್ಯುಸೆಕ್ ಆಗಿದ್ದು, ನಾಲೆಗೆ 500 ಕ್ಯುಸೆಕ್ ನೀರು ಹರಿಯ ಬಿಡಲಾಗುತ್ತಿದೆ. ಇಂದು ನೀರಿನ ಒಳಹರಿವು 5819 ಕ್ಯುಸೆಕ್, ಕಳೆದ ವರ್ಷ ಇದೇ ದಿನ ಒಳಹರಿವು 1400 ಕ್ಯುಸೆಕ್ ಆಗಿತ್ತು. 
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಪ್ರಸ್ತುತ ಮಟ್ಟ 2858.51 ಅಡಿಗಳಷ್ಟಿದೆ. ಜಲಾಶಯ ವ್ಯಾಪ್ತಿಯಲ್ಲಿ ಇಂದು 35.4 ಇಂಚು ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News