ನಾಳೆಯಿಂದ ವಿಧಾನ ಮಂಡಲ ಅಧಿವೇಶನ ಆರಂಭ: ಕಲಾಪ ಮೊಟಕು ಸಾಧ್ಯತೆ?

Update: 2020-09-20 14:12 GMT

ಬೆಂಗಳೂರು, ಸೆ. 20: ಕೋವಿಡ್-19 ಸೋಂಕಿನ ಕಾರ್ಮೋಡದ ನಡುವೆ ವಿಧಾನ ಮಂಡಲದ ಮುಂಗಾರು ಅಧಿವೇಶನ ಸೋಮವಾರ ಬೆಳಗ್ಗೆ 11ಗಂಟೆಯಿಂದ ಅಗಲಿದ ಗಣ್ಯರಿಗೆ ಸಂತಾಪ ಸೂಚಕ ನಿರ್ಣಯ ಮಂಡನೆಯೊಂದಿಗೆ ಆರಂಭಗೊಳ್ಳಲಿದೆ. ಆದರೆ, ಕೊರೋನ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಧಿವೇಶನ ಕಲಾಪವನ್ನು ಮೊಟಕುಗೊಳಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಆರೇಳು ಮಂದಿ ಸಚಿವರು ಹಾಗೂ ಹತ್ತಕ್ಕೂ ಹೆಚ್ಚು ಶಾಸಕರಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ. ಹೀಗಾಗಿ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನೂ ಕೆಲವರು ಹೋಂ ಐಸೋಲೇಷನ್‍ನಲ್ಲಿದ್ದಾರೆ. ನಿಯಮದಂತೆ ಆರು ತಿಂಗಳೊಳಗೆ ಅಧಿವೇಶನ ನಡೆಸಬೇಕು. ಆ ಹಿನ್ನೆಲೆಯಲ್ಲಿ ಸರಕಾರ ಬಜೆಟ್ ಅಧಿವೇಶನದ ಬಳಿಕ ನಾಳೆ(ಸೆ.21)ಯಿಂದ ಸೆ.30ರ ವರೆಗೆ ಎಂಟು ದಿನಗಳ ಕಾಲ ಅಧಿವೇಶನ ನಡೆಸಲು ತೀರ್ಮಾನಿಸಿತ್ತು. ಆದರೆ, ಇದೀಗ ಸಚಿವರು, ಶಾಸಕರಿಗೆ ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಅಧಿವೇಶನ ಮೊಟಕುಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ.

ಕರ್ನಾಟಕ ಭೂ ಸುಧಾರಣೆ, ಎಪಿಎಂಸಿ, ಕೈಗಾರಿಕಾ ತಿದ್ದುಪಡಿ ಕಾಯ್ದೆ ಸೇರಿದಂತೆ ಕೆಲ ಮಹತ್ವದ `ಅಧ್ಯಾದೇಶ'ಗಳನ್ನು ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸುವ ಅನಿವಾರ್ಯತೆಗೆ ರಾಜ್ಯ ಸರಕಾರಕ್ಕಿದೆ. ಆದರೆ, ರೈತರು ಮತ್ತು ಕಾರ್ಮಿಕರ ಭವಿಷ್ಯವನ್ನು ನಿರ್ಧರಿಸಲಿರುವ ಮಸೂದೆಗಳನ್ನು ಚರ್ಚಿಸದೆ ಅಂಗೀಕರಿಸಲು ಸಾಧ್ಯವಿಲ್ಲ ಎಂದು ವಿಪಕ್ಷ ಕಾಂಗ್ರೆಸ್ ಪಟ್ಟುಹಿಡಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಸರಕಾರ ಅಡ್ಡಕತ್ತರಿಯಲ್ಲಿ ಸಿಲುಕಿದೆ.

ಬಿಎಸ್ಸಿಯಲ್ಲಿ ಚರ್ಚೆ: ಸಂತಾಪ ಸೂಚನೆ ನಿರ್ಣಯದ ಬಳಿಕ ಅಧಿವೇಶನ ಮುಂದೂಡಲಿದ್ದು, ಆ ಬಳಿಕ ನಡೆಯಲಿರುವ ಕಲಾಪ ಸಲಹಾ ಸಮಿತಿ(ಬಿಎಸ್ಸಿ) ಸಭೆಯಲ್ಲಿ ಅಧಿವೇಶನದ ಅವಧಿಯ ಬಗ್ಗೆ ಸಮಾಲೋಚನೆ ನಡೆಸಲಿದ್ದು, ಮೊಟಕುಗೊಳಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ತೀರ್ಮಾನಿಸಲಾಗುತ್ತದೆ. ಲೊಕಸಭೆ ಅಧಿವೇಶನ ಮೊಟಕುಗೊಳಿಸಲು ಸಂಸದರು ಮನವಿ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಅಧಿವೇಶನ ಮೊಟಕುಗೊಳಿಸುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News