ಅಧಿವೇಶನ ಮೊಟಕುಗೊಳಿಸಲು ಸರಕಾರ ಯತ್ನ: ಡಿ.ಕೆ.ಶಿವಕುಮಾರ್

Update: 2020-09-20 14:29 GMT

ಬೆಂಗಳೂರು, ಸೆ. 20: ಸದನದಲ್ಲಿ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಅಧಿವೇಶನವನ್ನು ಮೂರು ದಿನಗಳಿಗೆ ಮೊಟಕುಗೊಳಿಸಿ ಪಲಾಯನವಾದ ಅನುಸರಿಸಲು ರಾಜ್ಯ ಸರಕಾರ ಮುಂದಾಗಿದ್ದು, ಇದಕ್ಕೆ ಕಾಂಗ್ರೆಸ್ ಪಕ್ಷ ಅವಕಾಶ ನೀಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ರವಿವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸಾಮಾಜಿಕ ಹೋರಾಟಗಾರ್ತಿ ಅಕೈ ಪದ್ಮಶಾಲಿ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸರಕಾರದ ಭ್ರಷ್ಟಚಾರ ಮಿತಿ ಮೀರಿ ನಡೆದಿದೆ. ಇಂತಹ ಸಂದರ್ಭದಲ್ಲಿ ಚರ್ಚೆಗೆ ಅವಕಾಶವಿಲ್ಲದಂತೆ ಸದನವನ್ನು ಮೊಟಕುಗೊಳಿಸಲು ನಾವು ಬಿಡುವುದಿಲ್ಲ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ನನಗೆ ಸಿಎಂ ಯಡಿಯೂರಪ್ಪ ಕರೆ ಮಾಡಿ,  ರಾಜ್ಯದಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದೆ. ಹೀಗಾಗಿ, ಅಧಿವೇಶನವನ್ನು ಮೂರು ದಿನಗಳಿಗೆ ಮೊಟಕುಗೊಳಿಸಲು ಇಚ್ಚಿಸಲಾಗಿದೆ ಎಂದು ಹೇಳಿದರು. ಆದರೆ, ಅಧಿವೇಶನದಲ್ಲಿ ಸುಮಾರು 1600 ಪ್ರಶ್ನೆಗಳನ್ನು ಕೇಳಲು ಶಾಸಕರು ಈಗಾಗಲೇ ತಯಾರಾಗಿದ್ದಾರೆ. ಕಳೆದ ಆರು ತಿಂಗಳಿನಿಂದ ಸರಕಾರ ಸತ್ತಿದ್ದು, ಜನರನ್ನೂ ಸಾಯಿಸುತ್ತಿದೆ. ಈ ಕುರಿತು ಚರ್ಚೆ ನಡೆಸಲು ಅವಕಾಶ ಬೇಕಾಗಿದೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷ ಅಧಿವೇಶನ ಮೊಟಕುಗೊಳಿಸಲು ಅವಕಾಶ ನೀಡಲ್ಲ ಎಂದರು.

ಕೊರೋನ ಸೋಂಕು ವ್ಯಾಪ್ತಿಸುತ್ತಿರುವ ಪ್ರಮಾಣ ಅಧಿಕಗೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ಅಧಿವೇಶನ ಮೊಟಕುಗೊಳಿಸಲು ಸೂಚಿಸಿದ್ದಾರೆ. ಹೀಗಾಗಿ, ಪ್ರಧಾನಿ ಮೋದಿಯ ಸೂಚನೆಯ ಮೇರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಮಂಡಲ ಅಧಿವೇಶನವನ್ನು ಮೂರು ದಿನಗಳಿಗೆ ಮೊಟಕುಗೊಳಿಸಲು ಮುಂದಾಗಿದ್ದಾರೆ. ಅಧಿವೇಶನದಲ್ಲಿ ಯಾವ ವಿಷಯವೂ ಚರ್ಚೆಯಾಗಬಾರದು ಎಂಬ ಕಾರಣಕ್ಕೆ ಮೊಟಕುಗೊಳಿಸುವ ನಾಟಕವಾಡುತ್ತಿದ್ದಾರೆ ಎಂದು ಅಪಾದಿಸಿದರು.

ವಿಧಾನಸಭೆ ಮೊಟಕುಗೊಳಿಸಲು ನಾವು ಬಿಡುವುದಿಲ್ಲ. ಜನರ ಪರವಾಗಿ ಧ್ವನಿ ಎತ್ತಲು ವಿರೋಧ ಪಕ್ಷಗಳಿಗಿರುವ ಅವಕಾಶವನ್ನು ನಾವು ಬಿಟ್ಟುಕೊಡುವುದಿಲ್ಲ. ವಿಪಕ್ಷಗಳನ್ನು ವಿಶ್ವಾಸಕ್ಕೆ ಪಡೆದು ಏನು ಬೇಕಾದರೂ ಮಾಡಬಹುದು ಎಂದು ಮುಖ್ಯಮಂತ್ರಿ ತಿಳಿದಿದ್ದಾರೆ. ಆದರೆ, ಅದಕ್ಕೆಲ್ಲಾ ನಾವು ಅವಕಾಶ ನೀಡುವುದಿಲ್ಲ ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News