​ಶಿವಮೊಗ್ಗ: ಭಾರೀ ಮಳೆ; ರೆಡ್ ಅಲರ್ಟ್ ಘೋಷಣೆ

Update: 2020-09-21 12:15 GMT

ಶಿವಮೊಗ್ಗ: ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಇನ್ನೂ ಎರಡು ಮೂರು ದಿನಗಳ ಕಾಲ ಮಳೆ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೇ, ಶಿವಮೊಗ್ಗ ಜಿಲ್ಲೆಯಲ್ಲೂ ರೆಡ್ ಅಲರ್ಟ್ ಘೋಷಿಸಲಾಗಿದೆ.

ಮಳೆ ಹಾನಿಗಿಂತ ನೆರೆಹಾನಿ ಹೆಚ್ಚಾಗುತ್ತಿದೆ. ಇದರಿಂದ ನದಿ ಪಾತ್ರದಲ್ಲಿರುವ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅಪಾರ ಆಸ್ತಿ, ಬೆಳೆ ಹಾನಿಯಾದ ಬಗ್ಗೆ ವರದಿಯಾಗಿದೆ.

ಭದ್ರಾ ಜಲಾಶಯ ತುಂಬಿದ್ದು, ನೀರನ್ನು ಅಪಾರ ಪ್ರಮಾಣದಲ್ಲಿ ನದಿಗೆ ಬಿಡಲಾಗುತ್ತಿದೆ. ಒಂದು ಹಂತದಲ್ಲಿ 70 ಸಾವಿರ ಕ್ಯುಸೆಕ್ ನೀರು ಹೊರಬಿಟ್ಟಿದ್ದರಿಂದ ಭದ್ರಾವತಿಯ ನದಿ ಪಾತ್ರದ ಅನೇಕ ಕುಟುಂಬದವರು ನಿರಾಶ್ರೀತರಾಗಿದ್ದಾರೆ. ಹೊಸ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. 32ಕ್ಕೂಹೆಚ್ಚು ಕುಟುಂಬಗಳ 100ಕ್ಕೂ ಹೆಚ್ಚು ಜನರನ್ನು ಕಾಳಜಿ(ಗಂಜಿ) ಕೇಂದ್ರಕ್ಕೆ ಕಳಿಸಲಾಗಿದ್ದು, ಅಲ್ಲಿ ಅವರು ಆಶ್ರಯಪಡೆದುಕೊಂಡಿದ್ದಾರೆ. ಸಿದ್ಧರೂಢನಗರ, ಹುತ್ತಾ ಕಾಲೋನಿ, ಬಿ.ಹೆಚ್. ರಸ್ತೆ, ತರಿಕೆರೆ ರಸ್ತೆ ಮುಂತಾದ ಕಡೆಗಳಲ್ಲಿ ನೀರು ಅಪಾರ ಪ್ರಮಾಣದಲ್ಲಿ ನುಗ್ಗಿದ್ದು, ಅಲ್ಲಲ್ಲಿ ರಕ್ಷಣಾ ಕೇಂದ್ರ ತೆರೆಯಲಾಗಿದೆ.
ಇಂದು ನೀರಿನ ಮಟ್ಟ ಸ್ವಲ್ಪ ತಗ್ಗಿದ್ದರೂ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿರುವುದರಿಂದ ಯಾವ ಸಮಯದಲ್ಲಿ ಬೇಕಾದರೂ ನದಿಗೆ ಹೆಚ್ಚಿನ ನೀರು ಬರುವ ಸೂಚನೆ ಇದ್ದು, ಇದಕ್ಕಾಗಿ ಭದ್ರಾವತಿ  ನಗರಸಭೆ ಮುನ್ನೆಚ್ಚರಿಕೆ ವಹಿಸಿದೆ ಎಂದು ಪೌರಾಯುಕ್ತ ವಿ. ಮನೋಹರ್ ತಿಳಿಸಿದ್ದಾರೆ.

ಶರಾವತಿ ಕೊಳ್ಳದಲ್ಲಿ ಸತತವಾಗಿ ಮಳೆಯಾಗುತ್ತಿದ್ದು ಲಿಂಗನಮಕ್ಕಿ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಈಗಾಗಲೇ 1811.05 ಅಡಿ ತಲುಪಿದ್ದು, ಗರಿಷ್ಠ 1819 ಆಗಿದೆ. ಭರ್ತಿಯಾಗಲು ಕೇವಲ 7 ಅಡಿಗಳಷ್ಟೇ ಉಳಿದಿದೆ. ಮಳೆ ಇದೇ ರೀತಿ ಮುಂದುವರೆದರೆ, ಲಿಂಗನಮಕ್ಕಿ ಸಹ ಬೇಗನೆ ಭರ್ತಿಯಾಗಲಿದೆ. ಈಗಾಗಲೇ ನೀರಿನ ಒಳಹರಿವು 34,733 ಕ್ಯುಸೆಕ್ ಆಗಿದ್ದು, 857 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.  ಹೊರ ಹರಿವಿನ ಪ್ರಮಾಣ ಯಾವಾಗ ಬೇಕಾದರೂ ಹೆಚ್ಚಾಗಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಜಲಾನಯನ ಪ್ರದೇಶದಲ್ಲಿ 85.20 ಮಿಮೀ ಮಳೆಯಾಗಿದ್ದು, ಶರಾವತಿ ಕಣಿವೆ ಪ್ರದೇಶದ ಅನೇಕ ಕಡೆ ಲಘು ಜಲಪಾತಗಳು ಸೃಷ್ಠಿಯಾಗಿವೆ. ಎಲ್ಲಾ ಕಡೆ ಕೆರೆ, ಕಟ್ಟೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಜೋಗಕ್ಕೆ ಮತ್ತೆ ಕಳೆ ಬಂದಿದೆ.

ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ಆಗುಂಬೆಯಲ್ಲೂ ಕಳೆದೆರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಆಗುಂಬೆ ಘಾಟ್ ಕೆಲವು ಕಡೆ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿತವಾಗಿದೆ. ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಹೊಸನಗರ ತಾಲ್ಲೂಕಿನಲ್ಲಿಯೂ ಧಾರಕಾರವಾಗಿ ಮಳೆಯಾಗಿದ್ದು, ಈ ಭಾಗದ ಹುಲಿಕಲ್, ನಾಗೋಡಿ ಘಾಟ್ ಪ್ರದೇಶದಲ್ಲಿ ಮಳೆ ಹೆಚ್ಚಾಗಿದ್ದು, ರಸ್ತೆ ಸಂಚಾರ ದುಸ್ತರವಾಗಿದೆ. ಜನರು ಮನೆಯಿಂದ ಹೊರಗೆ ಬರುವುದೇ ಕಷ್ಟವಾಗುತ್ತಿದೆ. ಹೊಸನಗರ ತಾಲ್ಲೂಕಿನ ಹಲವು ಕಡೆ ಧರೆ ಕುಸಿತವಾಗಿದೆ. ಜಿಲ್ಲಾಡಳಿತ ಎಚ್ಚರಿಕೆ ವಹಿಸುವಂತೆ ಆ ಭಾಗದ ಜನರು ಮನವಿ ಮಾಡಿದ್ದಾರೆ. ನಿನ್ನೆ ಒಂದೇ ದಿನ ಹೊಸನಗರ ತಾಲ್ಲೂಕಿನಲ್ಲಿ ೬೮ ಮಿಮೀ ಮಳೆಯಾಗಿದೆ. ಸೆಪ್ಟೆಂಬರ್ ೧ ರಿಂದ ಇದುವರೆಗೆ ಹೊಸನಗರ ತಾಲ್ಲೂಕಿನಲ್ಲಿ ೨೧೯.೬೦ ಮಿಮೀ ಮಳೆಯಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ತೀರ್ಥಹಳ್ಳಿ ಭಾಗದಲ್ಲೂ ಅತಿ ಹೆಚ್ಚು ಮಳೆಯಾಗಿದ್ದು, ತುಂಗಾ ನದಿ ತುಂಬಿಹರಿಯುತ್ತಿದೆ. ಕ್ಷಣಕ್ಷಣಕ್ಕೂ ನದಿಯ ನೀರು ಹೆಚ್ಚುತ್ತಿದ್ದು, ಅಪಾಯದ ಮಟ್ಟಕ್ಕೇರಿದೆ. ಗಾಳಿಯ ಜೊತೆಗೆ ಮಳೆಯ ಆರ್ಭಟವೂ ಈ ಭಾಗದಲ್ಲಿ ಹೆಚ್ಚಾಗಿದ್ದು, ಈಗಾಗಲೇ ತುಂಗಾ ಜಲಾಶಯ ಭರ್ತಿಯಾಗಿದೆ. ಜಲಾಶಯಕ್ಕೆ ೬೫,೨೭೮ ಕ್ಯಸೆಕ್ ನೀರು ಹರಿದುಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಶಿವಮೊಗ್ಗ ತಾಲ್ಲೂಕಿನಲ್ಲಿ ಕಳೆದ ೨೪ ಗಂಟೆಯಲ್ಲಿ ೧೬.೪೦ ಮಿಮೀ ಮಳೆಯಾಗಿದ್ದು, ಸೆಪ್ಟಂಬರ್ ೨೫೬.೦೦ ಮಿಮೀ ಮಳೆಯಾಗಿದೆ. ಇದು ವಾಡಿಕೆ ಮಳೆಗಿಂತ ೨ ರಡರಷ್ಟು ಅಧಿಕವಾಗಿದೆ.

ಜಿಲ್ಲೆಯ ಮಾಣಿ, ಯಡೂರು, ಹುಲಿಕಲ್, ಮಾಸ್ತಿಕಟ್ಟೆ, ಚಕ್ರಾ, ಸಾವೆಹಕ್ಲು ಪ್ರದೇಶಗಳಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಆಗುಂಬೆ ಹೊರತುಪಡಿಸಿ ಹುಲಿಕಲ್ ಹೆಚ್ಚು ಮಳೆಯಾಗುವ ಪ್ರದೇಶವಾಗಿದ್ದು, ಇಲ್ಲಿ ಕಳೆದ ೨೪ ಗಂಟೆಗಳಲ್ಲಿ ೩೦೦ ಮಿಮೀ ಮಳೆಯಾಗಿದ್ದು, ಪ್ರಸಕ್ತ ಸಾಲಿನಲ್ಲಿ ೭೧೬೬ ಮಿಮೀ ಮಳೆಯಾಗಿ ಅತ್ಯಂತ ಹೆಚ್ಚು ಮಳೆ ಬೀಳುವ ಸ್ಥಳವಾಗಿದೆ.

ಸೊರಬ ತಾಲ್ಲೂಕಿನಲ್ಲಿ ಕೂಡ ಮಳೆ ಜೋರಾಗಿದೆ. ಇಲ್ಲಿನ ಬಹುತೇಕ ಕೆರೆ ತುಂಬಿವೆ. ಮಳೆ ಆಗಿದ್ದಾಂಗ್ಗೆ ಬಿಟ್ಟು ಸುರಿಯುತ್ತಿದ್ದು, ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿ ಬೆಳೆ ನಷ್ಟವಾಗಿದೆ. ಶಿಕಾರಿಪುರ ತಾಲ್ಲೂಕಿನಲ್ಲಿಯೂ ಗಾಳಿ ಮಳೆ ಆರ್ಭಟ ಜೋರಾಗಿದೆ. ಒಟ್ಟಾರೆ ಇಡೀ ಜಿಲ್ಲೆಯಲ್ಲಿ ಮಳೆ ಮತ್ತೆ ಜೋರಾಗಿದ್ದು, ಕೊರೋನಾದ ಜೊತೆಗೆ ಅಟ್ಟಹಾಸ ಮೆರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News