ಅಧಿವೇಶನ ಬೇಗ ಮುಕ್ತಾಯಗೊಳಿಸಲು ವಿಪಕ್ಷಗಳ ಸಹಕಾರ ಕೋರುವೆ: ಸಿಎಂ ಯಡಿಯೂರಪ್ಪ

Update: 2020-09-21 12:35 GMT

ಬೆಂಗಳೂರು, ಸೆ. 21: ವಿಧಾನ ಮಂಡಲ ಅಧಿವೇಶವನ್ನು ಕೋವಿಡ್-19 ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದಷ್ಟು ಬೇಗ ಮುಕ್ತಾಯಗೊಳಿಸುವ ಸಂಬಂಧ ವಿರೋಧ ಪಕ್ಷಗಳ ಸಹಕಾರ ಕೋರಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಐವತ್ತರಿಂದ ಅರವತ್ತಕ್ಕೂ ಹೆಚ್ಚು ಮಂದಿ ಶಾಸಕರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಕೆಲವರು ಚಿಕಿತ್ಸೆ ಪಡೆಯುತ್ತಿದ್ದರೆ, ಕೆಲವರು ಕ್ವಾರಂಟೈನ್‍ನಲ್ಲಿ ಇದ್ದಾರೆ. ಹೀಗಾಗಿ ಅವರು ಸದನಕ್ಕೆ ಆಗಮಿಸಲು ಸಾಧ್ಯವಾಗುತ್ತಿಲ್ಲ. ಸದಸ್ಯರನ್ನು ಹೊರಗಿಟ್ಟು ಸದನ ನಡೆಸುವುದು ಸಾಧ್ಯವಿಲ್ಲ. ಹೀಗಾಗಿ ಬೇಗ ಮುಗಿಸಲು ಪ್ರತಿಪಕ್ಷದ ನಾಯಕರ ಸಹಕಾರ ಕೇಳಲಾಗುವುದು ಎಂದರು.

ಸದನ ಕಲಾಪ ಸಲಹಾ ಸಮಿತಿ(ಬಿಎಸ್ಸಿ) ಸಭೆಯಲ್ಲಿ ಈ ಸಂಬಂಧ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ, ಅವರು ಸಹಕಾರ ನೀಡಿದರೆ ಅದಷ್ಟು ಶೀಘ್ರವೇ ಅಧಿವೇಶನ ಕಲಾಪ ಮೊಟಕುಗೊಳಿಸುವ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದ ಅವರು, ಬಿಎಸ್ಸಿ ಬಳಿಕ ಅಧಿವೇಶನ ಕಲಾಪ ನಡೆಸುವ ಸಂಬಂಧ ನಿರ್ಧರಿಸಲಾಗುವುದು ಎಂದರು.

`ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸದನ ಮೊಟಕು ಮಾಡುವ ಬಗ್ಗೆ ಚರ್ಚೆ ನಡೆದಿದ್ದು, ಹಲವು ಶಾಸಕರು ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸದನಕ್ಕೆ ಹಾಜರಾಗುತ್ತಿಲ್ಲ. ಹಣಕಾಸು ವಿಧೇಯಕಕ್ಕೆ ಒಪ್ಪಿಗೆ ದೊರೆಯಬೇಕು. ಅಧಿವೇಶನದಲ್ಲಿ ಹಲವು ಮಸೂದೆಗಳಿಗೆ ಒಪ್ಪಿಗೆ ಪಡೆಯಬೇಕಿದೆ. ಎಷ್ಟು ದಿನ ಕಲಾಪ ನಡೆಸಬೇಕೆಂಬ ಬಗ್ಗೆ ಸಭೆ ನಡೆಸಿ ತೀರ್ಮಾನ ಮಾಡಲಾಗುವುದು'
-ಸಿ.ಟಿ.ರವಿ, ಪ್ರವಾಸೋದ್ಯಮ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News