ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ-ಗಾಳಿ

Update: 2020-09-21 13:31 GMT

ಬೆಂಗಳೂರು, ಸೆ.21: ರಾಜ್ಯದ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಾನ್ಸೂನ್ ಚುರುಕಾಗಿದ್ದು, ಭಾರೀ ಮಳೆ-ಗಾಳಿ ಬೀಸಲಿದೆ. ಕೊಲ್ಲೂರಿನಲ್ಲಿ 24 ಸೆಂ,ಮೀ, ಅಂಕೋಲ 22 ಸೆಂ.ಮೀ, ಕೊಟ್ಟಿಗೆಹಾರ 22 ಸೆಂ.ಮೀ, ಕದರ 16 ಸೆಂ.ಮೀ, ಶಿರಾ 15 ಸೆಂ.ಮೀ, ಕಾರ್ಕಳ 14 ಸೆಂ.ಮೀ ಮಳೆಯಾಗಿದೆ ಎಂದು ಪ್ರಾದೇಶಿಕ ವಿಭಾಗದ ಹವಾಮಾನ ಮುನ್ಸೂಚನೆ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.

ಬಂಗಾಳ ಉಪಸಾಗರದ ಉತ್ತರ ಒಡಿಶಾದ ಬಳಿ ವಾಯುಭಾರ ಕುಸಿತವಾಗಿದೆ. ಈ ಹಿನ್ನೆಲೆ ಕರಾವಳಿ ಜಿಲ್ಲೆಗಳಲ್ಲಿ ಸೆ.21 ರಿಂದ ಸೆ.25 ರವರೆಗೂ ಭಾರೀ ಮಳೆಯಾಗಲಿದೆ. 20 ಸೆಂ. ಮೀಟರ್ ಗೂ ಅಧಿಕ ಮಳೆಯಾಗುವುದರಿಂದ ಸೆ.21 ರಂದು ರೆಡ್ ಅಲರ್ಟ್ ನೀಡಲಾಗಿದೆ. ಸೆ.22 ರಂದು ಆರೆಂಜ್ ಅಲರ್ಟ್, 23ಕ್ಕೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ತಿಳಿಸಿದರು.

ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಸೆ.21 ರಿಂದ 25 ರವರೆಗೆ ಎಲ್ಲಾ ಕಡೆ ಮಳೆಯಾಗಲಿದೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಕೊಡಗು, ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಸೆ.21 ರಂದು ಆರೆಂಜ್ ಅಲರ್ಟ್ ನೀಡಲಾಗಿದೆ. ಸೆ.22ಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ, ಸೆ.25 ರಂದು ಯೆಲ್ಲೋ ಅಲರ್ಟ್ ಇರಲಿದೆ. ಬೆಂಗಳೂರಿನಲ್ಲಿ ಇಂದು ಮತ್ತ ನಾಳೆ ಮಳೆಯಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.

ಮೀನುಗಾರರಿಗೆ ಎಚ್ಚರಿಕೆ
ಕರ್ನಾಟಕದ ಕರಾವಳಿಯಲ್ಲಿ ಗಾಳಿಯ ವೇಗ 45ರಿಂದ 55 ಕಿ.ಮೀ ತಲುಪುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News