ಕಳಸ: ಮತ್ತೆ ಮಳೆಯಾರ್ಭಟ

Update: 2020-09-21 13:38 GMT

ಕಳಸ, ಸೆ.21: ಹೋಬಳಿಯಾದ್ಯಂತ ಸೋಮವಾರ ಮಳೆಯ ಆರ್ಭಟ ಸ್ವಲ್ಪ ಮಟ್ಟಿಗೆ ತಗ್ಗಿದೆಯಾದರೂ ಮಧ್ಯಾಹ್ನದ ಮೇಲೆ ಬಿರುಸಿನ ಮಳೆಯಾಗಿದೆ. ಶನಿವಾರ, ರವಿವಾರ ಹೋಬಳಿಯಾದ್ಯಂತ ಎಡೆ ಬಿಡದೆ ಮಳೆ ಸುರಿದಿತ್ತು. ಭಾರೀ ಮಳೆಗೆ ಭದ್ರಾ ನದಿ ತುಂಬಿ ಹರಿದು ಪ್ರವಾಹದ ಪರಿಸ್ಥಿತಿಯನ್ನು ನಿರ್ಮಿಸಿತ್ತು. ಹೆಬ್ಬಾಳೆ ಸೇತುವೆಯೂ ಮುಳುಗಡೆಯಾಗಿ ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿತ್ತು. ಆದರೆ ಸೋಮವಾರ ಹೋಬಳಿಯಲ್ಲಿ ಮಳೆ ಕ್ಷೀಣಗೊಂಡಿತ್ತಾದರೂ ಸಂಜೆ ವೇಳೆ ಮಳೆಯ ಅಬ್ಬರ ಮತ್ತೆ ಬಿರುಸುಗೊಂಡಿದೆ. 

ಕಳಸ-ಕುದುರೆಮುಖ-ಕಾರ್ಕಳ ರಸ್ತೆಯ ಎಸ್.ಕೆ.ಬಾರ್ಡರ್ ಮತ್ತು ಮಾಳ ಮಧ್ಯೆ ಹೆದ್ದಾರಿಗೆ ರವಿವಾರ ಸಂಜೆ ವೇಳೆ ಗುಡ್ಡವೊಂದು ಜರಿದು ಬಿದ್ದು, ರಸ್ತೆ ಕಡಿತಗೊಂಡಿತ್ತು. ಸೋಮವಾರ ರಾತ್ರಿ ಮಣ್ಣು ತೆರವು ಮಾಡಿದ್ದರಿಂದ ವಾಹನ ಸಂಚಾರ ಪುನಾರಂಭಗೊಂಡಿತ್ತು. ರವಿವಾರ ರಾತ್ರಿ ಇದೇ ಜಾಗದಲ್ಲಿ ಮತ್ತೆ ಭಾರೀ ಪ್ರಮಾಣದಲ್ಲಿ ಗುಡ್ಡ ಜರಿದು ಬಿದ್ದ ಪರಿಣಾಮ ಸೋಮವಾರ ಇಡೀ ದಿನ ಕಳಸ-ಕಾರ್ಕಳ-ಮಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಕಡಿತಗೊಂಡಿತ್ತು. ಸಂಜೆ ವೇಳೆ ಮಣ್ಣು ತೆರವು ಮಾಡಿದ್ದರಿಂದ ವಾಹನ ಸಂಚಾರ ಪುನಾರಂಭಗೊಂಡಿದೆ ಎಂದು ತಿಳಿದುಬಂದಿದೆ. ಇನ್ನು ಸೋಮವಾರ ಹೋಬಳಿಯಾದ್ಯಂತ ಬೀಸಿದ ಭಾರೀ ಗಾಳಿಯ ಪರಿಣಾಮ ಹೋಬಳಿಯಾದ್ಯಂತ ನೂರಾರು ಅಡಿಕೆ ಮರಗಳು ಧರೆಗುರುಳಿ ಬಿದ್ದಿದ್ದು, ಕೃಷಿಕರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News