ಕೋವಿಡ್-19: ಸೆಪ್ಟೆಂಬರ್ ಅಂತ್ಯದ ವರೆಗೆ ಶಾಲೆ/ಪದವಿಪೂರ್ವ ಕಾಲೇಜು ಭೇಟಿಗೆ ಅವಕಾಶವಿಲ್ಲ

Update: 2020-09-21 14:10 GMT

ಬೆಂಗಳೂರು, ಸೆ. 21: ಕೋವಿಡ್-19ರ ಹಿನ್ನೆಲೆಯಲ್ಲಿ ರಾಜ್ಯದ ಸರಕಾರಿ/ಅನುದಾನಿತ/ ಅನುದಾನ ರಹಿತ ಶಾಲಾ ಕಾಲೇಜುಗಳನ್ನು ಪ್ರಾರಂಭಿಸುವ ಬಗ್ಗೆ ಕೇಂದ್ರ ಸರಕಾರದ ಗೃಹ ಮಂತ್ರಾಲಯದ ಮಾರ್ಗಸೂಚಿ ಅಕ್ಟೋಬರ್ 29ರ ಮಾರ್ಗಸೂಚಿಯಂತೆ ಕಂಟೈನ್‍ಮೆಂಟ್ ಜೋನ್ ಹೊರತುಪಡಿಸಿ 9ನೆ ತರಗತಿಯಿಂದ 12ನೆ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಶಾಲೆಯನ್ನು ಸೆ.21ರಿಂದ ತೆರೆದು ವಿದ್ಯಾರ್ಥಿಗಳು ಸಂದೇಹ ಪರಿಹಾರಕ್ಕಾಗಿ ಶಾಲೆಗಳಿಗೆ ಭೇಟಿ ನೀಡಬಹುದೆಂದು ಅನುಮತಿ ನೀಡಲಾಗಿತ್ತು. ಆದರೆ, ಕೊರೋನ ಕಡಿಮೆಯಾಗದ ಹಿನ್ನಲೆಯಲ್ಲಿ ಸೆಪ್ಟಂಬರ್ ಅಂತ್ಯದವರೆಗೆ ಶಾಲೆ/ಪದವಿಪೂರ್ವ ಕಾಲೇಜುಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡುವುದನ್ನು ಹಿಂಪಡೆಯಲಾಗಿದೆ.

ಈ ಸಂಬಂಧ ವಿವರವಾಗಿ ಪರಿಶೀಲಿಸಿದ ನಂತರ ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಕೋವಿಡ್-19 ಹಬ್ಬುತ್ತಿರುವ ಪ್ರಮಾಣ ಕಡಿಮೆಯಾಗದ ಕಾರಣ, ಈಗಿನ ಪರಿಸ್ಥಿತಿಯಲ್ಲಿ ಶಾಲೆಗಳಿಗೆ ವಿದ್ಯಾರ್ಥಿಗಳು ಬರುವುದು ಕ್ಷೇಮಕರವಲ್ಲ ಎಂದು ಅಭಿಪ್ರಾಯಪಡಲಾಗಿದೆ. ಆದಕಾರಣ, ಸೆಪ್ಟೆಂಬರ್ ಅಂತ್ಯದವರೆಗೆ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳನ್ನು ಶಾಲೆ/ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಲು, ಅನುಮತಿ ನೀಡದಿರಲು ತೀರ್ಮಾನಿಸಲಾಗಿದೆ. ಪರಿಸ್ಥಿತಿಯ ಅವಲೋಕನೆಯ ನಂತರ ಮುಂದಿನ ತೀರ್ಮಾನವನ್ನು ತಿಳಿಸಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News