ಪ್ರಣವ್ ಮುಖರ್ಜಿ, ಸತ್ಯನಾರಾಯಣ, ಅಶೋಕ್ ಗಸ್ತಿ, ನಿಸಾರ್ ಅಹ್ಮದ್ ಸೇರಿ ಅಗಲಿದ ಗಣ್ಯರಿಗೆ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ

Update: 2020-09-21 14:20 GMT

ಬೆಂಗಳೂರು, ಸೆ. 21: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ರಾಜ್ಯಸಭೆ ಸದಸ್ಯ ಅಶೋಕ್ ಗಸ್ತಿ, ಶಾಸಕ ಬಿ.ಸತ್ಯನಾರಾಯಣ, ಮಾಜಿ ಶಾಸಕಿ ವಿನ್ನಿಫ್ರೆಡ್ ಫರ್ನಾಂಡಿಸ್, ನಿತ್ಯೋತ್ಸವ ಕವಿ ಡಾ.ಕೆ.ಎಸ್.ನಿಸಾರ್ ಅಹ್ಮದ್, ಕೇಶವಾನಂದ ಭಾರತಿ ಸ್ವಾಮಿ ಸೇರಿದಂತೆ ಕೋವಿಡ್, ನೆರೆ ಹಾಗೂ ಲಡಾಕ್ ಗಡಿಯಲ್ಲಿ ಹುತಾತ್ಮರಾದ ಯೋಧರು ಸಹಿತ ಇತ್ತೀಚೆಗೆ ಅಗಲಿದ ಗಣ್ಯರಿಗೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸೋಮವಾರ ಬೆಳಗ್ಗೆ 11ಗಂಟೆಯ ಸುಮಾರಿಗೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕ್ರಮವಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಸಂತಾಪ ಸೂಚಕ ನಿರ್ಣ ಮಂಡಿಸಿ, ಅಗಲಿದ ಗಣ್ಯರನ್ನು ಸ್ಮರಿಸಿದರು. ಕೆಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್, ಮಾಜಿ ಸಚಿವರಾದ ರಾಜಾ ಮದನ ಗೋಪಾಲನಾಯಕ್, ಜಿ.ರಾಮಕೃಷ್ಣ, ಮಾಜಿ ಸಂಸದ ರಾಜಾ ರಂಗಪ್ಪ ನಾಯಕ, ಮಾಜಿ ಶಾಸಕರಾದ ರತನ್ ಸಿಂಗ್, ಸಿ. ಗುರುಸ್ವಾಮಿ, ಎಂ.ಜಿ.ಅಪ್ಪಾಜಿಗೌಡ, ಡಾ.ಶ್ಯಾಮಲ ಭಾವೆ, ಪಂಡಿತ್ ಜಸ್‍ರಾಜ್, ಕಲಾವಿದ ಹೊಸ್ತೋಟ ಗಜಾನನ ಭಟ್ಟ ಅವರೆಲ್ಲ ನಿಧನ ಹೊಂದಿದ್ದಾರೆಂದು ತಿಳಿಸಿದರು.

ಸಂತಾಪ ಸೂಚಕ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷಾತೀತವಾಗಿ ಎಲ್ಲರಿಂದಲೂ ಪ್ರೀತಿ, ಗೌರವಗಳನ್ನು ಪಡೆಯುತ್ತಿದ್ದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ದೇಶದ ರಾಜಕಾರಣದಲ್ಲಿ ಪ್ರಣವ್ ದಾದಾ ಎಂದೇ ಜನಜನಿತರಾಗಿದ್ದರು. ರಾಜ್ಯಸಭೆ ಹಾಲಿ ಸದಸ್ಯ ಅಶೋಕ್ ಗಸ್ತಿ ಅತ್ಯಂತ ಹಿಂದುಳಿದ ಸಮುದಾಯದಿಂದ ಬಂದಿದ್ದ ಸರಳ, ಸಜ್ಜನಿಕೆಗೆ ಹೆಸರಾಗಿದ್ದರು ಎಂದು ಸ್ಮರಿಸಿದರು.

ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, `ನಮ್ಮ ಆಡಳಿತಾವಧಿಯಲ್ಲಿ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಮೀಸಲಾತಿ ಕಲ್ಪಿಸುವ ಮಸೂದೆಗೆ ಪ್ರಣವ್ ಮುಖರ್ಜಿ ಅಂಕಿತ ಹಾಕಿದ್ದರು. ಅತ್ಯಂತ ಎತ್ತರದ ವ್ಯಕ್ತಿತ್ವವನ್ನು ಹೊಂದಿದ್ದ ಪ್ರಣವ್ ಮುಖರ್ಜಿ ಪ್ರಧಾನಮಂತ್ರಿ ಆಗುವ ಎಲ್ಲ ಅರ್ಹತೆಗಳಿದ್ದರೂ, ಅವರಿಗೆ ಆ ಸ್ಥಾನ ದಕ್ಕಲಿಲ್ಲ ಎಂದರು.

ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹ್ಮದ್ ಅವರು ಭೂಗರ್ಭಶಾಸ್ತ್ರ ಅಧ್ಯಯನ ನಡೆಸಿದ್ದರೂ ಕವಿತೆ, ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಿದ್ದ ಜನಮೆಚ್ಚಿದ ಅಪರೂಪದ ಕವಿ ಎಂದು ಸ್ಮರಿಸಿದರು.

ಇದೇ ವೇಳೆ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಶಿರಾ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಬಿ.ಸತ್ಯನಾರಾಯಣ ಕಪಟ ರಾಜಕಾರಣ ಮಾಡದೆ ನೇರವಾಗಿ ರಾಜಕಾರಣ ಮಾಡಿದ ಅಪರೂಪದ ವ್ಯಕ್ತಿ. ರಾಜಕೀಯ ಕುಟುಂಬದ ಹಿನ್ನೆಲೆಯಲ್ಲೆ ಇಲ್ಲದೆ ಎತ್ತರಕ್ಕೆ ಬೆಳೆದಿದ್ದ ವ್ಯಕ್ತಿ. ಅವರ ನಿಧನದಿಂದ ಶಿರಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ನೆನಪಿಸಿಕೊಂಡರು.

`ಕೆ.ಎಸ್.ನಿಸಾರ್ ಅಹ್ಮದ್ ಅವರು ಹೊಸ ಪೀಳಿಗೆ ಬರಹಗಾರರನ್ನು ರೂಪಿಸುವುದು ಹಾಗೂ ಅವರಿಗೆ ವಿದ್ಯೆ ಕಲಿಸುವುದು ಅವರ ಹೆಗ್ಗುರಿಯಾಗಿತ್ತು. ಕೊನೆಯ ದಿನಗಳಲ್ಲಿ ಯಾರಿಗೂ ತೊಂದರೆ ನೀಡಬಾರದು ಎಂದು ಅತ್ಯಂತ ಸರಳ ರೀತಿಯಲ್ಲಿ ಬದುಕಿದರು. ಅವರ ಕುಟುಂಬವನ್ನು ನಾನು ಹತ್ತಿರದಿಂದ ಬಲ್ಲೆ, ಇಂದಿಗೂ ಕನಕಪುರ ತಾಲೂಕಿನಲ್ಲೆ ಅವರ ಕುಟುಂಬದ ಆಸ್ತಿ-ಪಾಸ್ತಿ ಇದೆ'
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

`ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ಕ್ಷೇತ್ರದಿಂದ ಎರಡು ಬಾರಿ ಶಾಸನಸಭೆಗೆ ಆಯ್ಕೆಯಾಗಿದ್ದ ವಿನ್ನಿಫ್ರೆಡ್ ಫರ್ನಾಂಡಿಸ್ ಅವರು ಮೊದಲ ಚುನಾಯಿತ ಮಹಿಳಾ ಸದಸ್ಯರೆನಿಸಿಕೊಂಡಿದ್ದರು. 2005ರಲ್ಲಿ ಮೇಲ್ಮನೆ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದು, ಬಡವರು, ಅನಕ್ಷರಸ್ಥರ ಶ್ರೇಯೋಭಿವೃದ್ಧಿಗಾಗಿ ಅಪಾರವಾಗಿ ಶ್ರಮಿಸಿದ್ದರು. ಅವರು ಅತ್ಯಂತ ಸರಳ ಮತ್ತು ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು'
-ಯು.ಟಿ.ಖಾದರ್, ಕಾಂಗ್ರೆಸ್ ಶಾಸಕ

`ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ನಮ್ಮ ಪಕ್ಷದ ಮುಖಂಡರಾದ ಅಶೋಕ್ ಗಸ್ತಿ ಅವರು ಅತ್ಯಂತ ಸರಳ ವ್ಯಕ್ತಿತ್ವದವರು. ರಾಯಚೂರು ಜಿಲ್ಲೆಯಲ್ಲಿ ಕಾನೂನು ಪದವೀಧರರಾಗಿದ್ದರು. ಅವರು ತಮ್ಮ ಮನೆಯನ್ನು ನಾಲ್ಕನೆ ಮಹಡಿಯಲ್ಲಿ ಮಾಡಿಕೊಂಡಿದ್ದರು. ಇದಕ್ಕೆ ಅವರೇ ಕೊಟ್ಟ ಕಾರಣ ಅಲ್ಲಿ ಬಾಡಿಗೆ ಕಡಿಮೆ ಎಂಬುದು. ಇದು ಅವರ ಸರಳತೆಗೆ ಸಾಕ್ಷಿಯಾಗಿತ್ತು'
-ರಾಜೂಗೌಡ ,ಆಡಳಿತ ಪಕ್ಷದ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News