ಹಿರಿಯ ಸಾಹಿತಿ, ಕಥೆಗಾರ ಅಬ್ಬಾಸ್ ಮೇಲಿನಮನಿ ನಿಧನ

Update: 2020-09-21 14:45 GMT

ಬೆಂಗಳೂರು, ಸೆ.21: ನಾಡಿನ ಜನಪ್ರಿಯ ಕಥೆಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಬಾಗಲಕೋಟೆಯ ಕಥೆಗಾರ ಅಬ್ಬಾಸ್ ಮೇಲಿನಮನಿ ಅವರು ಹೃದಯಾಘಾತದಿಂದ ನಿಧನರಾಗಿರುವುದು ಕನ್ನಡ ನಾಡಿನ ಸಾಹಿತ್ಯ ಲೋಕದ ನಕ್ಷತ್ರ ಕಳಚಿದಂತಾಗಿದೆ.

ಮೂಲತಃ ಬಾಗಲಕೋಟೆಯವರಾದ ಅಬ್ಬಾಸ್ ಮೇಲಿನಮನಿ ಅವರು, 1954ರ ಮಾ.5ರಂದು ಜನಿಸಿದ್ದಾರೆ. ಪದವಿ ಶಿಕ್ಷಣದವರೆಗಿನ ಬಾಗಲಕೋಟೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಪಡೆದ ಅವರು, ಧಾರವಾಡದ ಕರ್ನಾಟಕ ವಿವಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಅಬ್ಬಾಸ್ ಮೇಲಿನಮನಿ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾದ ಹೆಸರು ಗಳಿಸಿದವರು. ನೂರಾರು ಕಥಾ ಸಂಕಲನ, ಸಂಕಲನಗಳು, ಕಾದಂಬರಿಗಳನ್ನು ರಚಿಸಿ ಸಾಹಿತ್ಯ ಕೃಷಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಸಾಹಿತಿ ಎ.ಎಸ್. ಮಕಾನದಾರ ಕೊಡಮಾಡುವ ಗದಗ ನಿರಂತರ ಪ್ರಕಾಶನದ ಕಥಾಲೋಕದ ಜಂಗಮ ಮಂಗಳೂರಿನ ಮಹ್ಯುದ್ದೀನ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ, ಶಿವಮೊಗ್ಗ ಕ.ಸ.ಪ. ಲಂಕೇಶ್ ಕಥಾ ಪ್ರಶಸ್ತಿ, ತುಷಾರ ಎಚ್.ಎಂ.ಟಿ. ಅತ್ಯುತ್ತಮ ಕಥಾ ಪ್ರಶಸ್ತಿಗಳು ಲಭಿಸಿವೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಸದಸ್ಯರಾಗಿದ್ದರು.

ಪ್ರತಿಮೆ, ಆಕೃತಿಗಳನ್ನು ಕಟ್ಟಿಕೊಡುವುದನ್ನು ಇವರು ಕತೆಗಳ ಮೂಲಕ ಮಾಡಿದ್ದಾರೆ. ಹಿಂದೂ, ಮುಸ್ಲಿಂ ಸಮುದಾಯಗಳ ಸಾಮಾಜಿಕ ಸಂಬಂಧಗಳನ್ನು, ಅದರ ಸಂವೇದನೆಗಳನ್ನು ಅಬ್ಬಾಸ್ ಕಥೆಗಳು ಕಟ್ಟಿಕೊಡುತ್ತವೆ. 
ಜಿಲ್ಲೆಯ ಪತ್ರಿಕಾ ಕ್ಷೇತ್ರದೊಂದಿಗೆ ಉತ್ತಮವಾದ ಸಂಬಂಧವನ್ನು ಹೊಂದಿದ್ದ ಅವರು, ಬಾಗಲಕೋಟೆ ನಗರದ ಜಿಲ್ಲಾ ಪತ್ರಿಕೆಯೊಂದರಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು.  ಅಬ್ಬಾಸ್ ನಿಧನ ಸಾಹಿತ್ಯ ಲೋಕ ಹಾಗೂ ಅವರ ಅಭಿಮಾನಿ ಬಳಗಕ್ಕೆ ಭರಿಸಲಾಗದ ನಷ್ಟ ಉಂಟಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News