ಧಾರಾಕಾರ ಮಳೆ: ಕೊಡಗಿನ ನದಿಗಳಲ್ಲಿ ನೀರಿನ ಮಟ್ಟ ಏರಿಕೆ

Update: 2020-09-21 14:57 GMT

ಮಡಿಕೇರಿ, ಸೆ.21 : ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಭಾಗಮಂಡಲ, ಶಾಂತಳ್ಳಿ, ಮಡಿಕೇರಿ, ವಿರಾಜಪೇಟೆ ಭಾಗದಲ್ಲಿ ಹೆಚ್ಚಿನ ಮಳೆ ಸುರಿದು ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ನಾಡಿನ ಜೀವನಾಡಿ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹಾರಂಗಿ ಜಲಾಶಯಕ್ಕೂ ಹೆಚ್ಚಿನ ಒಳಹರಿವು ಹರಿದು ಬರುತ್ತಿದೆ.

ಆಗಸ್ಟ್ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹೆಚ್ಚು ಹಾನಿ ಸಂಭವಿಸಿತ್ತು. ಬಳಿಕ ಕೆಲ ದಿನಗಳಿಂದ ಬಿಡುವು ಪಡೆದಿದ್ದ ಮಳೆ. ಮತ್ತೆ ಬಿರುಸುಗೊಂಡಿದ್ದು, ಶೀತ ಗಾಳಿಯೂ ಬೀಸುತ್ತಿದೆ. 

ನಾಪೋಕ್ಲು ವ್ಯಾಪ್ತಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸಮೀಪದ ಕಾವೇರಿ ನದಿ ತುಂಬಿ ಹರಿಯುತ್ತಿದೆ. ಚೆರಿಯಪರಂಬು, ಕಲ್ಲುಮೊಟ್ಟೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ. ಚೆರಿಯ ಪರಂಬು ಪೈಸಾರಿ ನಿವಾಸಿಗಳಲ್ಲಿ ಮುಳುಗಡೆಯ ಆತಂಕ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಜನರಿಗೆ ಎಚ್ಚರದಿಂದಿರುವಂತೆ ಸೂಚನೆ ನೀಡಿದ್ದಾರೆ. 
ವಿರಾಜಪೇಟೆಯ ಬಲಮುರಿ ಹಾಗೂ ಕುಶಾಲನಗರದ ಕೊಪ್ಪ ಸೇತುವೆ ಬಳಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ.  

ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕಳೆದ ಕೆಲವು ದಿನಗಳಲ್ಲಿ 40 ರಿಂದ 50 ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹೆಚ್ಚಿನ ಹಾನಿ ಸಂಭವಿಸಿಲ್ಲ. ಅಲ್ಲದೆ ಯಾವುದೇ ಟ್ರಾನ್ಸ್ ಫಾರ್ಮರ್ ಗಳಿಗೂ ಹಾನಿಯಾಗಿಲ್ಲವೆಂದು ಸೆಸ್ಕ್ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಅವರು ಮಾಹಿತಿ ನೀಡಿದ್ದಾರೆ.

ವಿದ್ಯುತ್ ಕಂಬ ಬಿದ್ದು ಹಾನಿಗೀಡಾದ ಸ್ಥಳಕ್ಕೆ ತಕ್ಷಣವೇ ಭೇಟಿ ನೀಡಿ, ಸೆಸ್ಕ್ ತಂಡ ಅಲ್ಲಿನ ಹಾನಿಯನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿದೆ ಎಂದು ತಿಳಿಸಿದ್ದಾರೆ.

ಸೋಮವಾರಪೇಟೆ ತಾಲ್ಲೂಕಿನ ವಿವಿಧೆಡೆ ಭಾರೀ ಗಾಳಿ ಮಳೆಗೆ ಮರಗಳು ಬಿದ್ದಿವೆ. ಅಜ್ಜಳ್ಳಿಯಲ್ಲಿ ಬೃಹತ್ ಮರವೊಂದು ಬಿದ್ದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಹಾರಂಗಿಯಿಂದ 11,854 ಕ್ಯುಸೆಕ್ ನೀರು ಬಿಡುಗಡೆ
ನಿರಂತರ ಮಳೆಯಿಂದ ಕಾವೇರಿ ಸೇರಿದಂತೆ ಉಪ ನದಿಗಳು ತುಂಬಿ ಹರಿಯುತ್ತಿದ್ದು, ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಾಗಿರುವುದರಿಂದ 11,854 ಕ್ಯುಸೆಕ್ ನೀರನ್ನು ನದಿಗೆ ಹರಿಯ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ನದಿಗೆ 1675 ಕ್ಯುಸೆಕ್ ಬಿಡಲಾಗಿತ್ತು. ಇಂದಿನ ನೀರಿನ ಒಳಹರಿವು 8666 ಕ್ಯುಸೆಕ್ ಆಗಿದೆ. ಹಾರಂಗಿ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ 15.20 ಮಿ.ಮೀ ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗಿನ ಮಳೆ 2266.82 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2509.77 ಮಿ.ಮೀ ಮಳೆಯಾಗಿತ್ತು.                                 

ಮಡಿಕೇರಿ ತಾಲ್ಲೂಕಿನಲ್ಲಿ 3222.09 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 3422.57 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ 2046.05 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 2390.81 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ 1532.35 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1715.94 ಮಿ.ಮೀ. ಮಳೆಯಾಗಿತ್ತು. ಜಿಲ್ಲೆಯ ಜನರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ಜಿಲ್ಲಾಡಳಿತ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿದ್ದು, ತುರ್ತು ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳ 24*7 ಕಂಟ್ರೋಲ್ ರೂಂ ಸಂಖ್ಯೆ 0827-221077, ವ್ಯಾಟ್ಸ್ ಆ್ಯಪ್ ಸಂಖ್ಯೆ 8550001077 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News