"ಮನುಷ್ಯತ್ವವನ್ನೇ ಬೇರ್ಪಡಿಸುವ ಕ್ರೂರ ಕೊರೋನ ಬರದಂತೆ ಎಚ್ಚರ ವಹಿಸಿ"

Update: 2020-09-21 18:26 GMT

ಬೆಂಗಳೂರು, ಸೆ. 21: `ಮನುಷ್ಯತ್ವವನ್ನು ಬೇರ್ಪಡಿಸುವ ಮಾರಕ ಕೊರೋನ ವೈರಸ್ ಸೋಂಕು ತಗುಲದಂತೆ ಎಲ್ಲರೂ ಸೂಕ್ತ ಮುನ್ನಚ್ಚರಿಕೆ ವಹಿಸಬೇಕು. ಇದೊಂದು ಅತ್ಯಂತ ಅಪಾಯಕಾರಿ ಕಾಯಿಲೆ. ಈ ಸೋಂಕಿಗೆ ತುತ್ತಾದರೆ ಒಂದು ರೀತಿಯಲ್ಲಿ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದಂತೆ' ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಹೇಳುವ ಮೂಲಕ ಸೋಂಕು ನಿಯಂತ್ರಣಕ್ಕೆ ಸರಕಾರ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಸಲಹೆ ಮಾಡಿದ್ದಾರೆ.

ಸೋಮವಾರ ವಿಧಾನಸಭೆ ಸ್ಪೀಕರ್ ಮಂಡಿಸಿದ ಸಂತಾಪ ಸೂಚನೆ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಅವರು, `ಸೋಂಕು ಬರದವರಿಗೆ ಅದು ಎಂದಿಗೂ ಬರದಿರಲಿ. ಸೋಂಕು ದೃಢಪಟ್ಟವರು ರೋಗ ವಾಸಿಯಾಗುವವರೆಗೂ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಪತ್ನಿ, ಮಕ್ಕಳೆ ನಮ್ಮನ್ನು ನೋಡಲು ಬರುವುದಿಲ್ಲ. ಯಾರೊಂದಿಗೂ ಮಾತನಾಡುವ ಹಾಗಿಲ್ಲ' ಎಂದು ಹೇಳಿದರು.

ಕಾನೂನು ಸಚಿವ ಮಾಧುಸ್ವಾಮಿಗೆ ಸೋಂಕು ಬಂದಿಲ್ಲ, ಒಳ್ಳೆಯದು. ಕೆ.ಎಸ್.ಈಶ್ವರಪ್ಪ ಅವರಿಗೆ ಸೋಂಕು ತಗುಲಿತ್ತು. ನನಗೂ ಸೋಂಕು ಬಂದಿತ್ತು. ನನ್ನನ್ನು ನೋಡಲು ಹೆಂಡತಿ, ಮಕ್ಕಳೇ ಬರಲಿಲ್ಲ. ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಕೊರೋನ ಸೋಂಕಿನಿಂದಲೇ ಅಸುನೀಗಿದ್ದು, ಅವರ ಪತ್ನಿ ಮತ್ತು ಮಕ್ಕಳು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಇದಕ್ಕೆ ನಾನು ಹೇಳಿದ್ದು ಕೊರೋನ ಮನುಷ್ಯತ್ವ ಬೇರ್ಪಡಿಸುವ ರೋಗ ಎಂದು. ಹೀಗಾಗಿ ಎಲ್ಲರೂ ಸೂಕ್ತ ಮುನ್ನಚ್ಚರಿಕೆ ವಹಿಸಬೇಕು ಎಂದರು.

ಈ ಸೋಂಕಿಗೆ ಔಷಧಿ ಇಲ್ಲ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು. ಸ್ಯಾನಿಟೈಸರ್ ಬಳಕೆ ಮಾಡಬೇಕು ಎಂದು ಸಲಹೆ ಮಾಡಿದ ಸಿದ್ದರಾಮಯ್ಯ, ಸೋಂಕಿನ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಮರಣದ ಪ್ರಮಾಣ ಶೇ.2ಕ್ಕಿಂತಲೂ ಕಡಿಮೆ ಇದೆ. ಆದರೆ, ಯಾವುದೇ ಕಾರಣಕ್ಕೂ ಉದಾಸಿನ ಮಾಡಬೇಡಿ ಎಂದು ಅವರು ಸಲಹೆ ಮಾಡಿದರು.

ಹೊಸಬರನ್ನು ಕರೆತಂದು ಅಡುಗೆ: ನಾನು, ನನ್ನ ಪತ್ನಿ, ಮಗ, ಮನೆಯಲ್ಲಿ ಕೆಲಸ ಮಾಡುವವರಿಗೂ ಕೊರೋನ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಮೈಸೂರಿನಿಂದ ಸೋಂಕು ಇಲ್ಲದವರನ್ನು ಹೊಸದಾಗಿ ಕರೆತಂದು ಅಡುಗೆ ಮಾಡಿಸಿಕೊಂಡು ಊಟ ಮಾಡಬೇಕಾಯಿತು. ಹಾಲಿ ಸದಸ್ಯ ಸತ್ಯನಾರಾಯಣ, ಅಶೋಕ್ ಗಸ್ತಿ, ಅಪ್ಪಾಜಿಗೌಡ ಸೇರಿದಂತೆ ಹಲವರು ಕೊರೋನ ಸೋಂಕಿಗೆ ಬಲಿಯಾಗಿದ್ದು, ಅವರೆಲ್ಲರಿಗೂ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದರು.

ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಶಾಸಕ ಅರಗ ಜ್ಞಾನೇಂದ್ರ, `ಕೊರೋನ ಸೋಂಕಿನಿಂದ ಯಾರೊಬ್ಬರಿಗೂ ಸಾವು ಬರದಿರಲಿ ಎಂದು ಎಲ್ಲರೂ ಪ್ರಾರ್ಥಿಸಬೇಕಿದೆ. ಅಂತ್ಯ ಸಂಸ್ಕಾರಕ್ಕೂ ಹೋಗದ ಸ್ಥಿತಿ ಬಂದಿದೆ. ಹೀಗಾಗಿ ಈ ಸೋಂಕಿನ ಬಗ್ಗೆ ಉದಾಸಿನ ಮಾಡಬೇಡಿ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ಯಾವುದೇ ಜ್ವರವಿದ್ದರೂ ಕೂಡಲೇ ತಪಾಸಣೆ ಮಾಡಿಸಿಕೊಂಡರೆ ರೋಗದಿಂದ ಗುಣಮುಖರಾಗಬಹುದು ಎಂದರು.

ನೆರವು ನೀಡಿ: ಕೊರೋನ ಸೋಂಕು ನಿಯಂತ್ರಣಕ್ಕೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತರು ತಮ್ಮ ಜೀವದ ಹಂಗು ತೊರೆದು ಶ್ರಮಿಸುತ್ತಿದ್ದಾರೆ. ಆಪೈಕಿ ಕೆಲವರು ಈ ಸೋಂಕಿನಿಂದ ಮೃತಪಟ್ಟಿದ್ದು, ಸರಕಾರ ಅವರ ಕುಟುಂಬಕ್ಕೆ ಸೂಕ್ತ ಆರ್ಥಿಕ ನೆರವು ನೀಡಬೇಕು ಎಂದು ಅರಗ ಜ್ಞಾನೇಂದ್ರ ಇದೇ ವೇಳೆ ಆಗ್ರಹಿಸಿದರು.

`ಕೋವಿಡ್ ಸೋಂಕಿಗೆ ತುತ್ತಾದವರಿಗೆ ಉಚಿತ ಚಿಕಿತ್ಸೆ ಎಂದು ಸರಕಾರ ಹೇಳುತ್ತಿದೆ. ಆದರೆ, ಖಾಸಗಿ ಆಸ್ಪತ್ರೆಗಳು ಸೋಂಕಿತರಿಂದ 10 ರಿಂದ 15ಲಕ್ಷ ರೂ.ಗಳನ್ನು ವಸೂಲಿ ಮಾಡುತ್ತಿವೆ. ಜನರು ಆಸ್ತಿ, ಒಡವೆ ಅಡಮಾನ ಮಾಡುವಂತಹ ಸಂಕಷ್ಟದ ಪರಿಸ್ಥಿತಿ ಬಂದಿದೆ. ಹೀಗಾಗಿ ಸರಕಾರ ಸಿಎಂ ಪರಿಹಾರ ನಿಧಿಯಿಂದ ಸೋಂಕಿತರಿಗೆ ಆರ್ಥಿಕ ನೆರವು ನೀಡಲು ಕ್ರಮ ಕೈಗೊಳ್ಳಬೇಕು'
-ಯು.ಟಿ.ಖಾದರ್, ಕಾಂಗ್ರೆಸ್ ಶಾಸಕ

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News