ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ವಿವರ ತಿಳಿಸಲು ಕೇಂದ್ರೀಕೃತ ವ್ಯವಸ್ಥೆ ಅಗತ್ಯ: ಯು.ಟಿ.ಖಾದರ್

Update: 2020-09-22 16:59 GMT

ಬೆಂಗಳೂರು, ಸೆ.22: ಕೋವಿಡ್-19 ಸೋಂಕಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಲ್ಲಿ ಲಭ್ಯವಿರುವ ಆಕ್ಸಿಜನೇಟೆಡ್ ಹಾಗೂ ವೆಂಟಿಲೇಟರ್ ಯುಕ್ತ ಹಾಸಿಗೆಗಳ ವಿವರ ಜನಸಾಮಾನ್ಯರಿಗೆ ತಿಳಿಯುವಂತೆ ಜಿಲ್ಲಾಮಟ್ಟದಲ್ಲಿ ಕೇಂದ್ರೀಕೃತ ನಿರ್ವಹಣಾ ವ್ಯವಸ್ಥೆಯನ್ನು ಸರಕಾರ ಜಾರಿಗೆ ತರಬೇಕು ಎಂದು ಕಾಂಗ್ರೆಸ್ ಸದಸ್ಯ ಯು.ಟಿ.ಖಾದರ್ ಆಗ್ರಹಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ ಕೋವಿಡ್-19 ನಿರ್ವಹಣೆಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಕ್ಸಿಜನ್ ಹಾಗೂ ವೆಂಟಿಲೇಟರ್ ಯುಕ್ತ ಹಾಸಿಗೆಗಳ ವಿವರ ಸಿಗದೆ ಜನಸಾಮಾನ್ಯರು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದುದರಿಂದ, ಸರಕಾರ ಜಿಲ್ಲಾಮಟ್ಟದಲ್ಲಿ ಕೇಂದ್ರೀಕೃತ ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದರು.

ಈ ಸರಕಾರಕ್ಕೆ ಕರುಣೆ, ಮಾನವೀಯತೆ ಇಲ್ಲ. ಯಾರಾದರೂ ಸತ್ತರೆ ಅವರ ಮುಖನೋಡಲು ರಕ್ತ ಸಂಬಂಧಿಗಳಿಗೆ ಅವಕಾಶವಿಲ್ಲದಂತಾಗಿದೆ. ನಗರ, ಸ್ಥಳೀಯ ಸಂಸ್ಥೆಗಳಲ್ಲಿರುವ ಡಿ ಗ್ರೂಪ್ ನೌಕರರು ಶವಸಂಸ್ಕಾರ ಮಾಡುವುದಾದರೆ, ಕುಟುಂಬ ವರ್ಗದವರು ಯಾಕೆ ಮಾಡಲು ಸಾಧ್ಯವಿಲ್ಲ. ಈ ಸರಕಾರದ ಎಸ್‍ಓಪಿಗಳಿಂದಾಗಿ ರಕ್ತ ಸಂಬಂಧಿಗಳು ತಮ್ಮ ಮೃತ ಸಂಬಂಧಿಯನ್ನು ನೋಡಲು ಸಾಧ್ಯವಿಲ್ಲದಂತಾಗಿತ್ತು ಎಂದು ಅವರು ಹೇಳಿದರು.

ಬಳ್ಳಾರಿಯಲ್ಲಿ ಶವಸಂಸ್ಕಾರವನ್ನು ನೆರವೇರಿಸಿದ ರೀತಿ ಅತ್ಯಂತ ಅಮಾನವೀಯವಾದದ್ದು. ಪ್ರಾಣಿಗಳ ಶವಗಳನ್ನು ಹಾಕುವ ರೀತಿಯಲ್ಲಿ ಒಂದೇ ಗುಂಡಿಯಲ್ಲಿ ಐದಾರು ಮಂದಿಯ ಶವಗಳನ್ನು ಹಾಕಲಾಗಿತ್ತು. ನಮ್ಮ ದೇಶದಲ್ಲಿ ಕಾನೂನು ಬೇಕಾದರೂ ಮುರಿಯಬಹುದು. ಆದರೆ, ಸಂಪ್ರದಾಯ, ಸಂಸ್ಕೃತಿ ಮುರಿಯುವಂತಿಲ್ಲ. ಆಗಲೇ ನಾವು ಈ ಬಗ್ಗೆ ಧ್ವನಿ ಎತ್ತಬಹುದಿತ್ತು. ಆದರೆ, ಶವದ ಮೇಲೆ ರಾಜಕಾರಣ ಮಾಡುವುದು ನಮ್ಮ ಸಂಸ್ಕೃತಿಯಲ್ಲ ಎಂದು ಖಾದರ್ ಹೇಳಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಸಂಪ್ರದಾಯ, ಸಂಸ್ಕೃತಿ ಬಗ್ಗೆ ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ. ಈಗಿರುವ ವಿಚಾರದ ಬಗ್ಗೆಯಷ್ಟೇ ಮಾತನಾಡಿ. ಅನಗತ್ಯ ವಿಷಯಗಳನ್ನು ಪ್ರಸ್ತಾಪ ಮಾಡಬೇಡಿ ಎಂದರು. ಈ ಸಂದರ್ಭದಲ್ಲಿ ಖಾದರ್ ಹಾಗೂ ಮಾಧುಸ್ವಾಮಿ ನಡುವೆ ಮಾತಿನ ಚಕಮಕಿ ನಡೆಯಿತು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಬಳ್ಳಾರಿಯಲ್ಲಿ ಅಮಾನವೀಯವಾಗಿ ಶವಸಂಸ್ಕಾರ ನೇರವೇರಿಸಿದ ಪ್ರಕರಣಕ್ಕೆ ಸಂಬಂಧಿದಂತೆ ಅವತ್ತೆ ನಾಲ್ವರನ್ನು ಅಮಾನತ್ತು ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗಿದೆ. ಸಂಪ್ರದಾಯಗಳ ಬಗ್ಗೆ ನಮಗೂ ಅರಿವಿದೆ. ಕೆಲವು ಪ್ರಕರಣಗಳಲ್ಲಿ ಸಂಬಂಧಿಕರು ಶವ ತೆಗೆದುಕೊಳ್ಳಲು ಮುಂದೆ ಬಂದಿಲ್ಲ. ನಮ್ಮ ಸರಕಾರ ಗೌರವಯುತವಾಗಿ ಶವಸಂಸ್ಕಾರ ಮಾಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News