ರೈತರನ್ನು ಜೀತಕ್ಕೆ ತಳ್ಳುವ ಬಿಜೆಪಿ ಸರಕಾರದ ನೀತಿ ಅತ್ಯಂತ ಅಪಾಯಕಾರಿ: ಎಸ್‍ಡಿಪಿಐ

Update: 2020-09-22 17:16 GMT

ಬೆಂಗಳೂರು, ಸೆ.22: ರೈತರ ಸಮಸ್ಯೆ ಪರಿಹರಿಸುವ ಬದಲಿಗೆ ಇನ್ನಷ್ಟು ಬಡತನಕ್ಕೆ ತಳ್ಳುವ ಹಾಗೂ ಕೃಷಿ ಭೂಮಿಯನ್ನು ಬಂಡವಾಳಶಾಹಿಗಳು ಖರೀದಿಸಲು ಅನುವು ಮಾಡಿಕೊಡುವ ಕೇಂದ್ರ ಹಾಗೂ ರಾಜ್ಯ ಸರಕಾರದ ನೀತಿ ದುಷ್ಟ ಎಂದು ಎಸ್‍ಡಿಪಿಐ ರಾಜ್ಯ ಸಮಿತಿ ಖಂಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್, ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು ಕೃಷಿ ಕ್ಷೇತ್ರವನ್ನು ಕಾರ್ಪೋರೇಟೀಕರಣ ಮಾಡಲು ಹೊರಟಿರುವುದರೊಂದಿಗೆ ರೈತರನ್ನು ಜೀತದಾಳುಗಳನ್ನಾಗಿಸಲು ಪಣತೊಟ್ಟಿವೆ. ಗ್ರಾಮೀಣ ಪ್ರದೇಶಗಳ ಜನರು ಹಾಗೂ ರೈತರ ಬದುಕಿನ ಜೊತೆಗೆ ಚೆಲ್ಲಾಟವಾಡುವ ಬಿಜೆಪಿ ಸರಕಾರಗಳ ದುರ್ನೀತಿಯ ವಿರುದ್ಧ ಎಸ್‍ಡಿಪಿಐ ಸಂಘಟಿತ ಹೋರಾಟ ನಡೆಸುವುದು ಎಂದು ತಿಳಿಸಿದ್ದಾರೆ.

ಬಂಡವಾಳಶಾಹಿಗಳು ಕೃಷಿಭೂಮಿಯನ್ನು ಖರೀದಿಸುವ ಮಿತಿಯನ್ನು ಸರಕಾರಗಳು ತೆಗೆದು ಹಾಕಿರುವುದರಿಂದ ಕೃಷಿ ಜಮೀನುಗಳು ದೊಡ್ಡ ಜಮೀನುದಾರ ಹಾಗೂ ಧನಿಕರ ಪಾಲಾಗುವುದು. ಸಾಲದ ಸುಳಿಯಿಂದ ತತ್ತರಿಸಿರುವ ಬಡ ರೈತರು ತಮ್ಮ ಜಮೀನುಗಳನ್ನು ಬಲಾಢ್ಯ ಹಾಗೂ ಉಳಿಗಮಾನ್ಯರಿಗೆ ಮಾರುವುದರಿಂದ ರೈತರು ಕೃಷಿಕ್ಷೇತ್ರವನ್ನು ತ್ಯಜಿಸುವುದರೊಂದಿಗೆ ಜೀತದಾಳುಗಳು ಆಗುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ ಎಂದು ವಿವರಿಸಿದ್ದಾರೆ.

ಕೊರೋನ ಭ್ರಷ್ಟಾಚಾರ, ಆಂತರಿಕ ಕಚ್ಚಾಟ, ಆರ್ಥಿಕ ದುಸ್ಥಿತಿ ಇತ್ಯಾದಿ ವಿಷಯಗಳನ್ನು ಎದುರಿಸಲಾಗದೆ ಅಧಿವೇಶನವನ್ನು ಮುಂದೂಡಿರುವುದು ಹೇಡಿತನದ ಕೃತ್ಯ್ಯವೂ ಪ್ರಜಾಪ್ರಭುತ್ವ ವಿರೋಧಿಯೂ ಆಗಿದೆ ಎಂದು ಅವರು ಕಿಡಿಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News