ಮೈಸೂರು: ಪ್ರೋತ್ಸಾಹ ಧನ ನೀಡಲು ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ಧರಣಿ

Update: 2020-09-22 17:22 GMT

ಮೈಸೂರು,ಸೆ.22: ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12,000 ರೂ. ಮತ್ತು ಬಾಕಿ ಪ್ರೋತ್ಸಾಹ ಧನ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಎಐಯುಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಂಗಳವಾರ ನಡೆದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ನಮ್ಮ ರಾಜ್ಯದಲ್ಲಿ 4000 ರೂ. ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ಮತ್ತು ಕೇಂದ್ರ ಸರ್ಕಾರದಿಂದ ಚಟುವಟಿಕೆಗಳನ್ನು ಆಧರಿಸಿ ನೀಡುವ ಪ್ರೋತ್ಸಾಹ ಧನ ಸರಾಸರಿ 5000-6000, ಎರಡೂ ಸೇರಿ ಸುಮಾರು 9000-10,000 ಪಡೆಯುವಂತೆ ಯೋಜನೆ ಇದೆ. ಇದಕ್ಕೆಸರ್ಕಾರದ ಅನುದಾನವೂ ಇದೆ. ಆದರೆ ಇದುವರೆಗೆ ಸರಿಯಾಗಿ ತಲುಪುತ್ತಿಲ್ಲ. ಅಂತೆಯೇ ಇದಕ್ಕೆ ಇನ್ನೊಂದಿಷ್ಟು ಹಣವನ್ನು ಸೇರಿಸಿ 12,000 ನಿಗದಿಯಾಗಿ ಕೊಡುವುದು ಸರ್ಕಾರಕ್ಕೆ ಕಷ್ಟವಲ್ಲ. ಆದ್ದರಿಂದ ತಮ್ಮ ಪರಿಸ್ಥಿತಿ ಉತ್ತಮಪಡಿಸಿಕೊಳ್ಳಲು ಅವರು ವರ್ಷ ವರ್ಷ ಹೋರಾಟಗಳನ್ನು ನಡೆಸುತ್ತಲೇ ಬಂದಿದ್ದಾರೆ ಎಂದು ತಿಳಿಸಿದರು.

ಕಳೆದ ಜನವರಿ ತಿಂಗಳಲ್ಲಿ ನಡೆದ ರಾಜ್ಯಮಟ್ಟದ ಚಳವಳಿಯನ್ನು ಆರೋಗ್ಯ ಮಂತ್ರಿಗಳ ಆಶ್ವಾಸನೆಯೊಂದಿಗೆ ಹಿಂಪಡೆಯಲಾಗಿತ್ತು. ಆದರೆ ಭರವಸೆ ಭರವಸೆಯಾಗಿಯೇ ಉಳಿಯಿತು. ನಂತರದ ದಿನಗಳಲ್ಲಿ ಕೋವಿಡ್ ಮಹಾಮಾರಿ ವಿರುದ್ಧ ಆಶಾ ಕಾರ್ಯಕರ್ತೆಯರು ಕಾರ್ಯಪ್ರವೃತ್ತರಾದರು. ಈ ಹಿನ್ನೆಲೆಯಲ್ಲಿ ಕಳೆದ ಜುಲೈ 10ರಿಂದ 20ರವರೆಗೆ ರಾಜ್ಯದ ಆಶಾ ಕಾರ್ಯಕರ್ತೆಯರು ತಮ್ಮ ಕನಿಷ್ಠ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಿದ್ದರು. ಆರೋಗ್ಯ ಸಚಿವರು ಕ್ರಮ ತೆಗೆದುಕೊಳ್ಳುವುದಾಗಿ ವಚನವಿತ್ತರು. ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಲಾಗಿತ್ತು. ಆದರೆ ಸರ್ಕಾರದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ನಮ್ಮ ಬೇಡಿಕಗಳನ್ನು ಈಡೇರಿಸುವುದಾಗಿ ವಚನವಿತ್ತರೂ ಏನನ್ನೂ ಘೋಷಣೆ ಮಾಡದೆ ಇರುವುದು ದುಃಖಕರ. ಸರ್ಕಾರ ಸೂಕ್ತ ಕ್ರಮ ಕೈಗೊಂಡು ಆರ್ಥಿಕ ಸಂಕಷ್ಟದಲ್ಲಿ ಇರುವ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದರು. ಇಲ್ಲದಿದ್ದಲ್ಲಿ ನಾಳೆಯಿಂದ ರಾಜ್ಯದ ಆಶಾ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ಹೋರಾಟ ನಡೆಸಲಿದ್ದಾರೆಂದು ಎಚ್ಚರಿಸಿದರು

ಭರವಸೆಯಂತೆ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಸಂಬಳ 12,000 ಕೂಡಲೇ ಘೋಷಿಸಿ, ಮೇಲಿಂದ ಮೇಲೆ ಎಲ್ಲಾ ಕಾರ್ಯಕರ್ತೆಯರ ಆರೋಗ್ಯ ತಪಾಸಣೆ ಮಾಡಬೇಕು. ಮಾಸ್ಕ್, ಹ್ಯಾಂಡ್ ಗ್ಲೌಸ್, ಫೇಸ್ ಶೀಲ್ಡ್ ಮತ್ತು ಸ್ಯಾನಿಟೈಸರ್ ಇತ್ಯಾದಿಗಳನ್ನು ಸಮರ್ಪಕವಾಗಿ ನೀಡಬೇಕು. ಬಾಕಿ ಇರುವ ಪ್ರೋತ್ಸಾಹ ಧನ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಿ, ಈಗಾಗಲೇ ಘೋಷಿಸಿದ 3000 ಕೋವಿಡ್ ವಿಶೇಷ ಪ್ರೋತ್ಸಾಹ ಧನವನ್ನು ಇನ್ನೂ ತಲುಪದಿರುವ ಆಶಾ ಕಾರ್ಯಕರ್ತೆಯರಿಗೆ ಪಾವತಿಯಾಗುವಂತೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಧ್ಯಾ ಪಿ.ಎಸ್, ಸುನೀತ. ಮಂಗಳ, ಗೌರಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News