ಚಿಕ್ಕಮಗಳೂರು: ಜಿಲ್ಲಾದ್ಯಂತ ಕ್ಷೀಣಿಸಿದ ಮಳೆ; ಮೂಡಿಗೆರೆಯಲ್ಲಿ ಎರಡು ಮನೆಗಳಿಗೆ ಹಾನಿ

Update: 2020-09-22 17:26 GMT

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಎರಡು ದಿನಗಳ ಕಾಲ ಅಬ್ಬರಿಸಿದ್ದ ಮಳೆ ಸೋಮವಾರ ಮತ್ತು ಮಂಗಳವಾರ ಕ್ಷೀಣಿಸಿದೆಯಾದರೂ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ಮುಂದುವರಿದಿದೆ. ಮಲೆನಾಡು ಭಾಗದಲ್ಲಿ ಮೂಡಿಗೆರೆ ತಾಲೂಕಿನಲ್ಲಿ ಮಂಗಳವಾರ ಧಾರಾಕಾರ ಮಳೆ ಮುಂದುವರಿದಿದ್ದರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕು ವ್ಯಾಪ್ತಿಯಲ್ಲಿ ಆಗಾಗ್ಗೆ ಸಾಧಾರಣ ಮಳೆಯಾಗಿದೆ.

ಮಂಗಳವಾರ ಮೂಡಿಗೆರೆ ತಾಲೂಕಿನ ಭೈರಾಪುರ, ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿ ಸುತ್ತಮುತ್ತ ಹಾಗೂ ಕಳಸ ಹೋಬಳಿಯ ಕುದುರೆಮುಖ ಸುತ್ತಮುತ್ತಲ ಪ್ರದೇಶದಲ್ಲಿ ನಿರಂತರಾಗಿ ಮಳೆಯಾಗುತ್ತಿದೆ. ಪರಿಣಾಮ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚುತ್ತಿದೆ. ಮೂಡಿಗೆರೆ ತಾಲೂಕು ಬಣಕಲ್, ಕೊಗಿಲೆ, ದೇವರಮನೆ, ಕೊಟ್ಟಿಗೆಹಾರ, ಮೂಲರಹಳ್ಳಿ, ಬಾಳೂರು, ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಮತ್ತು ಕಳಸ, ಮಂಗಳವಾರ ಸಂಜೆ ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಭದ್ರಾನದಿ ಮತ್ತು ಹೇಮಾವತಿ ನದಿ ನೀರಿನ ಹರಿವು ಹೆಚ್ಚಾಗಿದೆ.

ಮೂಡಿಗೆರೆ ತಾಲೂಕಿನಾದ್ಯಂತ ಮಂಗಳವಾರ ಧಾರಾಕಾರ ಮಳೆಯಾದ ಪರಿಣಾಮ ತ್ರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಕ್ಕಿ ಗ್ರಾಮದ ಲಲಿತಮ್ಮ ಎಂಬವರ ಮನೆ ಗೋಡೆ ಕುಸಿದಿದೆ. ತಾಲೂಕಿನ ಬಣಕಲ್ ಗ್ರಾಮ ಪಂಚಾಯತ್‍ನ ಕಸ್ತೂರಿ ಎಂಬವರ ಮನೆಗೆ ಮಳೆಯಿಂದ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಇನ್ನು ತಾಲೂಕಿನ ಜಾವಳಿ ಸಮೀಪ ಮಂಗಳವಾರ ಬೆಳಗ್ಗೆ ಬೃಹತ್ ಮರ ರಸ್ತೆಗೆ ಬಿದ್ದ ಪರಿಣಾಮ ಕೊಟ್ಟಿಗೆಹಾರ-ಹೊರನಾಡು ಸಂಪರ್ಕ ಕಲ್ಪಿಸುವ ರಸ್ತೆ ಮೂರು ಗಂಟೆಗೂ ಹೆಚ್ಚು ಕಾಲ ಬಂದ್ ಆಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟರು.

ಕಡೂರು, ತರೀಕೆರೆ, ಚಿಕ್ಕಮಗಳೂರು ತಾಲೂಕಿನಾದ್ಯಂತ ಮಳೆ ಕ್ಷೀಣಿಸಿದ್ದು, ಬೆಳಗಿನಿಂದ ಮಧ್ಯಹ್ನದ ವರೆಗೆ ಬಿಸಿಲಿನ ವಾತಾವರಣವಿದ್ದು, ಮಧ್ಯಾಹ್ನದಿಂದ ಸಂಜೆವರೆಗೆ ಧಟ್ಟ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಒಟ್ಟಾರೆ ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಕಂಗೆಟ್ಟಿದ್ದ ಜನರು ಸದ್ಯ ನಿಟ್ಟುಸಿರುವ ಬಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News