‘ಮಹಾನಾಯಕ’ ಫ್ಲೆಕ್ಸ್ ವಿಚಾರ: ದಲಿತ ವ್ಯಕ್ತಿಗಳಿಬ್ಬರ ಮೇಲೆ ಹಲ್ಲೆ

Update: 2020-09-22 17:36 GMT

ಎಚ್.ಡಿ.ಕೋಟೆ, ಸೆ.22: ‘ಮಹಾನಾಯಕ’ ಧಾರಾವಾಹಿಯ ಫ್ಲೆಕ್ಸ್ ಅಳವಡಿಕೆ ವಿಚಾರವಾಗಿ ದಲಿತ ಸಮುದಾಯಕ್ಕೆ ಸೇರಿದ ತಾಯಿ ಮಗನ ಮೇಲೆ ಮೇಲ್ಜಾತಿಯ ವ್ಯಕ್ತಿಗಳು ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಗಂಗಡಹೊಸಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದ್ದು, 7 ಮಂದಿ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಹಲ್ಲೆಗೊಳಗಾದ ಗಂಗಡಹೊಸಳ್ಳಿ ಗ್ರಾಮದ ದಲಿತ ಸಮುದಾಯದ ಪ್ರದೀಪ್ (29) ಮತ್ತು ಆತನ ತಾಯಿ ಗೌರಮ್ಮ (45) ಎಚ್.ಡಿ.ಕೋಟೆ ತಾಲೂಕು ಕೇಂದ್ರ ಸ್ಥಾನದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಗಂಗಡಹೊಸಳ್ಳಿ ಗ್ರಾಮದ ಮಹೇಂದ್ರ ಅಲಿಯಾಸ್ ಉಪ್ಪಿ, ಪುನೀತ್ ಅಲಿಯಾಸ್ ಪುನಿ, ಶ್ರೀನಿವಾಸ, ದರ್ಶನ್, ನಿಖಿಲ್, ಸಂದರ್ಶ, ಶಿವರಾಜು ಹಲ್ಲೆ ನಡೆಸಿರುವ ಆರೋಪಿಗಳೆಂದು ಪೊಲೀಸರು ತಿಳಿಸಿದ್ದು, ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು: ಗಂಗಡಹೊಸಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನಾಧಾರಿತ ‘ಮಹಾನಾಯಕ’ ಧಾರಾವಾಹಿಯ ಫ್ಲೆಕ್ಸ್‌ವೊಂದನ್ನು ದಲಿತ ಸಮುದಾಯ ಅಳವಡಿಸಿತ್ತು. ಇದರಿಂದ ಕುಪಿತಗೊಂಡ ಅನ್ಯ ಸಮುದಾಯದವರು ಫ್ಲೆಕ್ಸ್ ಅನ್ನು ಬ್ಲೇಡ್‌ನಿಂದ ಕತ್ತರಿಸಿದ್ದರೆನ್ನುವ ಆರೋಪದ ಹಿನ್ನೆಲೆಯಲ್ಲಿ ಎಚ್.ಡಿ.ಕೋಟೆ ಪಿಎಸ್ಸೈ ಎಂ.ನಾಯಕ್ ಮತ್ತು ತಾ.ಸಮಾಜ ಕಲ್ಯಾಣಾಧಿಕಾರಿ ಗೋಪಾಲಕೃಷ್ಣ ಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಘಟನೆಗೆ ವಿರೋಧವಾಗುವುದನ್ನು ತಡೆಗಟ್ಟುವ ಸಲುವಾಗಿ ಗ್ರಾಮಸ್ಥರಿಗೆ ತಿಳುವಳಿಕೆ ನೀಡಿ ಅದೇ ಜಾಗದಲ್ಲಿ ಹೊಸ ಫ್ಲೆಕ್ಸ್ ಅಳವಡಿಸಿ ಪ್ರಕರಣಕ್ಕೆ ತೆರೆ ಎಳೆಯಲಾಗಿತ್ತು ಎಂದು ತಿಳಿದುಬಂದಿದೆ.

ಸೋಮವಾರ ಪ್ರದೀಪ್ ಹುಣಸೂರಿನ ಗದ್ದಿಗೆಗೆ ಹೋಗಿ ವಾಪಸ್ ತೆರಳುವಾಗ ಹಲ್ಲೆ ನಡೆಸಿದ ಆರೋಪಿಗಳು ಮತ್ತೆ ಗಲಾಟೆಗೆ ಸಜ್ಜಾಗುತ್ತಿದ್ದಂತೆಯೇ ಪ್ರದೀಪ್ ಅಲ್ಲಿಂದ ಸ್ವಗ್ರಾಮಕ್ಕೆ ವಾಪಸ್ಸಾಗಿದ್ದಾರೆ. ಆದರೆ ರಾತ್ರಿ 8 ಗಂಟೆ ಸಮಯದಲ್ಲಿ ಆರೋಪಿಗಳು ಪ್ರದೀಪ್ ಮನೆಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿರುವುದಾಗಿ ಗಾಯಾಳುಗಳು ಆರೋಪಿಸಿದ್ದಾರೆ.

ಸ್ಥಳಕ್ಕೆ ಪಿಎಸ್ಸೈ ನಾಯಕ್ ಮತ್ತು ಸಮಾಜ ಕಲ್ಯಾಣಾಧಿಕಾರಿ ಗೋಪಾಲಕೃಷ್ಣ ಮೂರ್ತಿ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News