ಈ ರೀತಿಯ ಆ್ಯಪ್‍ಗಳು ಡೌನ್ ಲೋಡ್ ಮಾಡುವಾಗ ಎಚ್ಚರ ಎಂದ ಕೇಂದ್ರ ಸರಕಾರ

Update: 2020-09-23 04:52 GMT

  ಹೊಸದಿಲ್ಲಿ : ಅನಾಮಿಕ ಯುಆರ್‍ಎಲ್‍ಗಳ ಮುಖಾಂತರ ಆಕ್ಸಿಮೀಟರ್ ಆ್ಯಪ್‍ಗಳನ್ನು ಡೌನ್‍ಲೋಡ್ ಮಾಡುವುದರ ವಿರುದ್ಧ ಕೇಂದ್ರ ಸರಕಾರವು ತನ್ನ ಸೈಬರ್ ಜಾಗೃತಿ ಟ್ವಿಟ್ಟರ್ ಹ್ಯಾಂಡಲ್ ಸೈಬರ್ ದೋಸ್ತ್ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಈ ಕೆಲವೊಂದು ಆ್ಯಪ್‍ಗಳು ಬಳಕೆದಾರರ ದೇಹದಲ್ಲಿನ ಆಮ್ಲಜನಕ ಪ್ರಮಾಣವನ್ನು ಪರೀಕ್ಷಿಸುವ  ಅಪ್ಲಿಕೇಶನ್ ಎಂದು ತಮ್ಮನ್ನು ಬಣ್ಣಿಸುತ್ತಿವೆಯಾದರೂ ಅವುಗಳು ಬಳಕೆದಾರರ ಖಾಸಗಿ ಮಾಹಿತಿ, ಚಿತ್ರಗಳು, ಕಾಂಟಾಕ್ಟ್ ಪಟ್ಟಿಗಳು ಹಾಗೂ ಬಯೋಮೆಟ್ರಿಕ್ ಬೆರಳಚ್ಚುಗಳನ್ನು ಕೇಳುವ ಮೂಲಕ ಬಯೋಮೆಟ್ರಿಕ್ ಮಾಹಿತಿಯನ್ನೂ ಕದಿಯಬಹುದು ಎಂದು ಸರಕಾರ ಎಚ್ಚರಿಸಿದೆ.

ಪ್ರಸಕ್ತ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ  ಮುಖ್ಯವಾಗಿ ಮನೆಗಳಲ್ಲಿಯೇ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರು ತಮ್ಮ ರಕ್ತದಲ್ಲಿನ ಆಮ್ಲಜನಕ ಪ್ರಮಾಣವನ್ನು ಆಕ್ಸಿಮೀಟರ್ ಮೂಲಕ ಪರೀಕ್ಷಿಸಬಹುದಾಗಿದೆ.

ಆಕ್ಸಿಮೀಟರ್ ಸಾಧನಗಳು ಈಗ ಸುಲಭವಾಗಿ ಮಾರುಕಟ್ಟೆಗಳಲ್ಲಿ ಹಾಗೂ ಆನ್‍ಲೈನ್ ಮೂಲಕ ಲಭ್ಯವಿದ್ದರೂ ಆಕ್ಸಿಮೀಟರ್ ಆ್ಯಪ್‍ಗಳಿಗೂ ಬೇಡಿಕೆ ಅಧಿಕವಾಗಿದೆ.

ಸೈಬರ್ ದೋಸ್ತ್ ಟ್ವಿಟ್ಟರ್ ಹ್ಯಾಂಡಲ್ ಅನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನೋಡಿಕೊಳ್ಳುತ್ತಿದೆ.

ಈ ಟ್ವಿಟ್ಟರ್ ಹ್ಯಾಂಡಲ್ ಈಗಾಗಲೇ ಇ-ವ್ಯಾಲೆಟ್ ಆ್ಯಪ್ ಡೌನ್‍ಲೋಡ್ ಮಾಡುವಾಗ ಎಚ್ಚರಿಕೆ ವಹಿಸುವಂತೆ ಹಾಗೂ ಸೂಕ್ತ ಪರಾಮರ್ಶೆಯ ನಂತರವಷ್ಟೇ  ಹಾಗೂ ನೇರವಾಗಿ ಆ್ಯಪಲ್ ಅಥವಾ ಗೂಗಲ್ ಪ್ಲೇಸ್ಟೋರ್ ಮೂಲಕವೇ ಡೌನ್‍ಲೋಡ್ ಮಾಡುವಂತೆ ಸೂಚಿಸಿದೆ. ಇಮೇಲ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿರಬಹುದಾದ ಇ-ವ್ಯಾಲೆಟ್ ಕುರಿತಾದ ಲಿಂಕ್‍ಗಳು ಮೋಸದ ಉದ್ದೇಶ ಹೊಂದಿರುವ ಲಿಂಕ್‍ಗಳಾಗಿರಬಹುದು ಎಂದೂ ಸರಕಾರ ಎಚ್ಚರಿಕೆ ನೀಡಿದೆ.

ಯುಪಿಐ ಆ್ಯಪ್‍ಗಳ ಮೂಲಕ ಡಿಸ್ಕೌಂಟ್ ಕೂಪನ್, ಕ್ಯಾಶ್ ಬ್ಯಾಕ್ ಅಥವಾ ಫೆಸ್ಟಿವಲ್ ಕೂಪನ್‍ಗಳ ಕುರಿತಂತೆಯೂ ಎಚ್ಚರಿಕೆ ವಹಿಸಬೇಕು ಅವುಗಳು ಕೆಲವೊಮ್ಮೆ ಮೋಸದ ಜಾಲಗಳಾಗಿರಬಹುದು ಎಂದು ಸೋಮವಾರವಷ್ಟೇ ಸೈಬರ್ ದೋಸ್ತ್ ಎಚ್ಚರಿಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News