ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದ ವಿಪಕ್ಷಗಳು

Update: 2020-09-23 16:19 GMT

ಹೊಸದಿಲ್ಲಿ, ಸೆ. 23: ವಿವಾದಾತ್ಮಕ ಕೃಷಿ ಹಾಗೂ ಕಾರ್ಮಿಕ ವಿಧೇಯಕ ವಿರೋಧಿಸಿ ಪ್ರತಿಪಕ್ಷಗಳ ಸಂಸದರು ಬುಧವಾರ ಸಂಸತ್‌ಭವನದ ಆವರಣದಲ್ಲಿ ಗಾಂಧಿ ಪ್ರತಿಮೆಯಿಂದ ಅಂಬೇಡ್ಕರ್ ಪ್ರತಿಮೆ ವರೆಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸಂಸತ್‌ಭವನದ ಆವರಣದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಯಿಂದ ಅಂಬೇಡ್ಕರ್ ಪ್ರತಿಮೆ ವರೆಗೆ ನಡೆಸಿದ ಪ್ರತಿಭಟನೆ ಸಂದರ್ಭ ಸಂಸದರು ‘ಕೃಷಿಕರನ್ನು ರಕ್ಷಿಸಿ, ಕಾರ್ಮಿಕರನ್ನು ರಕ್ಷಿಸಿ, ಪ್ರಜಾಪ್ರಭುತ್ವ ರಕ್ಷಿಸಿ’ ಮೊದಲಾದ ಸಂದೇಶಗಳು ಇರುವ ಪ್ರದರ್ಶನ ಫಲಕಗಳನ್ನು ಹಿಡಿದುಕೊಂಡಿದ್ದರು. ಅಲ್ಲದೆ, ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಸಾಲಾಗಿ ನಿಂತುಕೊಂಡು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಿಪಿಐ, ಸಿಪಿಎಂ, ಡಿಎಂಕೆ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಆಮ್ ಆದ್ಮಿ ಪಕ್ಷ (ಎಎಪಿ), ಸಮಾಜವಾದಿ ಪಕ್ಷ ಹಾಗೂ ಎನ್‌ಸಿಪಿ ಸದಸ್ಯರು ಪಾಲ್ಗೊಂಡರು. ‘‘ಸಂಸತ್ತಿನಲ್ಲಿ ಮೋದಿ ಸರಕಾರ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ರೀತಿಯಲ್ಲಿ ಅಂಗೀಕರಿಸಿದ ವಿಧೇಯಕ ರೈತ ವಿರೋಧಿ, ಕಾರ್ಮಿಕರ ವಿರೋಧಿಯಾದುದು ಎಂದು ಪ್ರತಿಪಾದಿಸಿ ಕಾಂಗ್ರೆಸ್ ಹಾಗೂ ಇತರ ಸಮಾನ ಮನಸ್ಕ ಪಕ್ಷಗಳ ಸಂಸದರು ಸಂಸತ್ ಭವನದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಯಿಂದ ಅಂಬೇಡ್ಕರ್ ಪ್ರತಿಮೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು’’ ಎಂದು ರಾಜ್ಯಸಭೆಯ ಕಾಂಗ್ರೆಸ್‌ನ ಮುಖ್ಯ ಸಚೇತಕ ಜೈರಾಮ್ ರಮೇಶ್ ಟ್ವೀಟ್‌ನಲ್ಲಿ ಹೇಳಿದ್ದಾರೆ. ಇದಕ್ಕಿಂತ ಮೊದಲು ಪ್ರತಿಪಕ್ಷಗಳ ಸದಸ್ಯರು ಕೃಷಿ ವಿಧೇಯಕದ ವಿರುದ್ಧ ಮುಂದಿನ ತಂತ್ರ ರೂಪಿಸಲು ರಾಜ್ಯ ಸಭೆಯ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಝಾದ್ ಅವರ ಕೊಠಡಿಯಲ್ಲಿ ಸಭೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News