ಎಪಿಎಂಸಿ: ರೈತ ಮುಖಂಡರ ಜೊತೆ ಚರ್ಚೆ ಮಾಡಲು ಸರಕಾರಕ್ಕೆ ಕುಮಾರಸ್ವಾಮಿ ಆಗ್ರಹ

Update: 2020-09-23 11:39 GMT

ಬೆಂಗಳೂರು, ಸೆ.23: ಎಪಿಎಂಸಿ ಕಾಯ್ದೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರವು ರೈತ ಮುಖಂಡರನ್ನು ಕರೆಸಿ ಚರ್ಚೆ ಮಾಡಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವುದು ಉತ್ತಮ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಬುಧವಾರ ವಿಧಾನಸೌಧದಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದಲ್ಲಿ ಈ ಕಾಯ್ದೆ ವಾಪಸ್ ಪಡೆಯಲಾಗಿದೆ. ಕೋವಿಡ್ ಸಂದರ್ಭದಲ್ಲಿ ತರಾತುರಿಯಲ್ಲಿ ಈ ವಿಧೇಯಕವನ್ನು ತರಬೇಕಿತ್ತಾ? ಆರು ತಿಂಗಳು ಮುಂದೂಡಿದ್ದರೆ ಏನಾಗುತ್ತಿತ್ತು ಎಂದು ಪ್ರಶ್ನಿಸಿದರು.

ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ 4 ದಿನಗಳಲ್ಲಿ ಸದನದಲ್ಲಿ ನಮ್ಮ ಚಟುವಟಿಕೆಗಳು ಹೇಗಿರಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಗಿದೆ. ಸಮಯ ಕಡಿಮೆ ಇದೆ. ಜನ ವಿರೋಧಿ ಕಾಯ್ದೆಗಳ ಬಗ್ಗೆ ಧ್ವನಿ ಎತ್ತಲಾಗುವುದು. ಕೊರೋನ ತುಂಬಾ ಗಂಭೀರವಾದ ವಿಷಯ. ಜೊತೆಗೆ ಜನ ಹಾಗೂ ಜನ ಪ್ರತಿನಿಧಿಗಳ ಆರೋಗ್ಯವು ಮುಖ್ಯ ಎಂದು ಕುಮಾರಸ್ವಾಮಿ ಹೇಳಿದರು.

ಸದನವನ್ನು ಮೊಟಕುಗೊಳಿಸುವ ಸಂಬಂಧ ಎಲ್ಲರ ಅಭಿಪ್ರಾಯ ಆಧರಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಚರ್ಚೆ ಇಲ್ಲದೆ ಎಲ್ಲ ವಿಧೇಯಕಗಳನ್ನು ಪಾಸ್ ಮಾಡಲಾಗುತ್ತಿದೆ. ಸಂಸತ್ತಿನಲ್ಲೂ ಇದೇ ರೀತಿ ಆಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಿನ್ನೆ ವಿಧಾನಸಭೆಯಲ್ಲಿ ಕೊರೋನ ವಿಚಾರ ಚರ್ಚೆ ಮಾಡಿ ಮಾಧ್ಯಮಗಳಲ್ಲಿ ದೊಡ್ಡಮಟ್ಟದ ಪ್ರಚಾರ ತೆಗೆದುಕೊಂಡಿದ್ದು ಬಿಟ್ಟರೆ ಏನು ಸಾಧನೆ ಮಾಡಿದ್ದೀರಾ? ಎಂದು ಕಾಂಗ್ರೆಸ್ ಪಕ್ಷಕ್ಕೆ ಪ್ರಶ್ನಿಸಿದ ಅವರು, ನಿನ್ನೆ ನಡೆದ ಕಲಾಪದಲ್ಲಿ ನಾನು ಭಾಗವಹಿಸಿದ್ದರೂ ಒಂದೇ, ಭಾಗವಹಿಸದೆ ಇದ್ದಿದ್ದರೂ ಒಂದೇ ಎಂದರು.

ರಾಜ್ಯ ಸರಕಾರ 1600 ಕೋಟಿ ರೂ.ಗಳ ಕೊರೋನ ಪ್ಯಾಕೇಜ್ ಘೋಷಣೆ ಮಾಡಿತ್ತು. ಅದರಲ್ಲಿ ಈವರೆಗೆ ಎಷ್ಟು ಕೊಟ್ಟಿದೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಇವತ್ತಿನ ಎಪಿಎಂಸಿ ಕಾಯ್ದೆಯ ಚರ್ಚೆಯಲ್ಲಿ ಭಾಗವಹಿಸುತ್ತೇನೆ. ಈ ಕಾಯ್ದೆಯ ಸಾಧಕ, ಬಾಧಕಗಳ ಬಗ್ಗೆ ಚರ್ಚೆ ಆಗಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News