ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ಶೀಘ್ರದಲ್ಲಿ ಆದೇಶ

Update: 2020-09-23 13:48 GMT

ಬೆಂಗಳೂರು, ಸೆ.23: ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಬದ್ಧವಾಗಿದ್ದು, ಈ ಸಂಬಂಧ ಸರಕಾರಿ ಆದೇಶವನ್ನು ಹೊರಡಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

ಬುಧವಾರ ವಿಧಾನಪರಿಷತ್‍ನಲ್ಲಿ ನಿಯಮ 330 ಅಡಿಯಲ್ಲಿ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಖಾಸಗಿ ಕ್ಷೇತ್ರದಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಸಂಬಂಧಿಸಿದಂತೆ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಸಲುವಾಗಿ ಸರಕಾರಿ ಆದೇಶ ಹೊರಡಿಸಲಾಗುವುದು. ಅಲ್ಲದೆ, ಎ ಮತ್ತು ಬಿ ದರ್ಜೆಯ ಹುದ್ದೆಗಳಿಗೆ ಆದ್ಯತೆ ಮೇರೆಗೆ ಅವಕಾಶ ನೀಡಬೇಕು ಎಂದು ಸೂಚಿಸಲಾಗುವುದು ಎಂದು ಹೇಳಿದರು.

ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಮಟ್ಟದಲ್ಲಿ ಅನುಷ್ಠಾನ ಸಮತಿಗಳನ್ನು ನೇಮಕ ಮಾಡಲಾಗುವುದು. ಇವರಿಗೆ ತರಬೇತಿಯನ್ನು ನೀಡಲಾಗುತ್ತದೆ ಎಂದು ಮಾಧುಸ್ವಾಮಿ ತಿಳಿಸಿದರು.

ಈ ನಡುವೆ ಮಾತನಾಡಿದ ಸಚಿವ ಸಿ.ಟಿ.ರವಿ, 1 ರಿಂದ ಎಸೆಸೆಲ್ಸಿವರೆಗೂ ಕಲಿತವರನ್ನು ಅಥವಾ 15 ವರ್ಷ ಕರ್ನಾಟಕದಲ್ಲಿ ಬದುಕುತ್ತಿರುವರಲ್ಲಿ ಯಾರನ್ನು ಕನ್ನಡಿಗರು ಎಂದು ಪರಿಗಣಿಸಬೇಕು ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಬಸವರಾಜ ಹೊರಟ್ಟಿ, 1 ರಿಂದ ಎಸೆಸೆಲ್ಸಿವರೆಗೂ ಕಲಿತವರನ್ನೇ ಕನ್ನಡಿಗರೆಂದು ಪರಿಗಣಿಸಿ ಎಂದು ಹೇಳಿದರು.

ಮಾತು ಮುಂದುವರಿಸಿದ ಸಚಿವ ರವಿ, ಕೌಶಲ್ಯ ಹಾಗೂ ಮಾನಸಿಕ ತರಬೇತಿಯನ್ನು ಯುವಜನರಿಗೆ ನೀಡಬೇಕಾಗಿದೆ. ಪುಣೆ, ಮುಂಬೈ ಅಂತಹ ಪ್ರದೇಶಗಳಲ್ಲಿ ದುಡಿಯುವವರು, ತಮ್ಮ ಸ್ವಂತ ನಾಡಿನಲ್ಲಿ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ. ಹೊರ ರಾಜ್ಯಗಳಿಂದ ಬಂದವರು ಕನ್ನಡ ಕಲಿತಿದ್ದಾರೆ. ಡಿ.ವಿ.ಜಿ., ಬೇಂದ್ರೆ, ಗೋಕಾಕ್ ಮೂಲತಃ ಕನ್ನಡವರಾಗಿರಲಿಲ್ಲ. ಆದರೂ ಸಾಕಷ್ಟು ಸಾಧನೆ ಮಾಡಿದ್ದಾರೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News