ರೈತ, ಕಾರ್ಮಿಕ ಸಂಘಟನೆಗಳಿಂದ ಸೆ.28ರಂದು 'ಕರ್ನಾಟಕ ಬಂದ್‍'ಗೆ ಕರೆ

Update: 2020-09-23 14:40 GMT

ಬೆಂಗಳೂರು, ಸೆ.23: ರೈತರ ತೀವ್ರ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಎಪಿಎಂಸಿ ತಿದ್ದುಪಡಿ ಕಾಯ್ದೆ ವಿಧೇಯಕ ಮಂಡನೆ ಮಾಡಿರುವುದು ಮತ್ತು ಭೂ ಸುಧಾರಣಾ ಕಾಯ್ದೆ ವಿರೋಧಿಸಿ ರೈತ ಪರ ಸಂಘಟನೆಗಳು ಸೆ.28ರಂದು ಬಂದ್‍ಗೆ ಕರೆ ನೀಡಿವೆ.

ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್ ತಿದ್ದುಪಡಿ ಕಾಯ್ದೆಗಳಿಗೆ ತಿದ್ದುಪಡಿ ಸೇರಿ ಇನ್ನಿತರ ಕಾಯ್ದೆಗಳ ಮಂಡನೆ ಕುರಿತಂತೆ ರೈತರ ಸಲಹೆ ಪಡೆದುಕೊಂಡಿಲ್ಲ. ಬುಧವಾರ ಎಪಿಎಂಸಿ ತಿದ್ದುಪಡಿ ಕಾಯ್ದೆ ವಿಧೇಯಕವನ್ನು ಮಂಡನೆ ಮಾಡುವ ಮೂಲಕ ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಖವಾಡ ಬಯಲಾಗಿದೆ. ಈ ಎಲ್ಲ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಸೆ.28ರಂದು ಕರ್ನಾಟಕ ಬಂದ್‍ಗೆ ಕರೆ ನೀಡಲಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಅಗತ್ಯ ಸೇವೆ ಹೊರತುಪಡಿಸಿ ಸಂಪೂರ್ಣ ಬಂದ್ ಆಚರಿಸಲಾಗುವುದು. ಈ ಬಂದ್ ಆಚರಣೆಗೆ ರಾಜ್ಯದ ಎಲ್ಲ ರೈತ ಪರ ಸಂಘಟನೆಗಳು, ಕಾರ್ಮಿಕ, ದಲಿತ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಲಿವೆ. ಅಲ್ಲದೆ, ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗಿದೆ ಎಂದು ಕೋಡಿಹಳ್ಳಿ ಅವರು ತಿಳಿಸಿದ್ದಾರೆ.

ಸ್ವಾತಂತ್ರ್ಯ ಉದ್ಯಾನವನ, ಮೌರ್ಯ ಸರ್ಕಲ್ ಬಳಿ ಮೂರ್ನಾಲ್ಕು ದಿನಗಳಿಂದ ರೈತರು, ಕಾರ್ಮಿಕರು ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ಅಹೋರಾತ್ರಿ ಧರಣಿ ನಡೆಸಿದ್ದರು. ಈ ನಮ್ಮ ಒತ್ತಾಯಕ್ಕೆ ಮಣಿದು ಮಸೂದೆಯನ್ನು ತಡೆ ಹಿಡಿಯಬಹುದು ಎಂಬ ವಿಶ್ವಾಸವಿತ್ತು. ಆದರೆ, ಸರಕಾರ ನಮ್ಮ ಬೇಡಿಕೆಗೆ ವಿರುದ್ಧವಾಗಿ ಎಪಿಎಂಸಿ ತಿದ್ದುಪಡಿ ಕಾಯ್ದೆ ವಿಧೇಯಕವನ್ನು ಮಂಡನೆ ಮಾಡಿದೆ ಎಂದು ಆಕ್ರೋಶ ಹೊರ ಹಾಕಿದರು.

ಸಭೆಯಲ್ಲಿ ತೀರ್ಮಾನ: ಅಖಿಲ ಭಾರತ ಕೃಷಿ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 9ಕ್ಕೂ ಹೆಚ್ಚು ರೈತ ಸಂಘಟನೆಗಳು, 10ಕ್ಕೂ ಹೆಚ್ಚು ದಲಿತ ಸಂಘಟನೆಳು ಮತ್ತು ಕಾರ್ಮಿಕ ಸಂಘಟನೆಗಳು ಸೆ.28ರ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿವೆ. 

ಜಿಲ್ಲಾ ಕೇಂದ್ರಗಳಲ್ಲೂ ಬಂದ್‍ಗೆ ಕರೆ

ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, ತಾಲೂಕು ಮಟ್ಟದಲ್ಲಿ ಸೆ.25ರಂದು ಪ್ರತಿಭಟನೆ ನಡೆಸಲಾಗುವುದು. ರಸ್ತೆ ತಡೆ ನಡೆಸಿ, ಜೈಲ್ ಭರೋ ಚಳವಳಿ ನಡೆಯುತ್ತದೆ. ಸೆ.28ರಂದು ಸಂಪೂರ್ಣ ಬಂದ್‍ಗೆ ಕರೆ ನೀಡಲಾಗಿದೆ.

-ಕುರುಬೂರು ಶಾಂತಕುಮಾರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ

ಸೆ.25ರಂದು 5 ಸಾವಿರ ಜನ ಸೇರಿಸಿ ಧರಣಿ

‘ಸೆ.25ಕ್ಕೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಸೇರಿ ಧರಣಿ ನಡೆಸಿ, ರಸ್ತೆ ತಡೆದು ಪ್ರತಿಭಟನೆ ನಡೆಸುತ್ತೇವೆ. ರಾಜ್ಯಾದ್ಯಂತ ಎಲ್ಲ ಜಿಲ್ಲೆ, ಹಳ್ಳಿಗಳಲ್ಲೂ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡುತ್ತೇವೆ.’

-ಮಾರುತಿ ಮಾನ್ಪಡೆ, ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ 

ಕೋಡಿಹಳ್ಳಿ ಸೇರಿ ಹಲವು ಮುಖಂಡರ ಬಂಧನ

ಸ್ವಾತಂತ್ರ್ಯ ಉದ್ಯಾನವನ, ಮೌರ್ಯ ಸರ್ಕಲ್ ಬಳಿ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್ ತಿದ್ದುಪಡಿ ಕಾಯ್ದೆಗಳಿಗೆ ತಿದ್ದುಪಡಿ ವಿರೋಧಿಸಿ ಧರಣಿ ನಡೆಸುತ್ತಿದ್ದ ರಾಜ್ಯ ರೈತ ಸಂಘ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸೇರಿ ಹಲವು ಮುಖಂಡರನ್ನು ಬುಧವಾರ ಪೊಲೀಸರು ಬಂಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News