ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕರು ಶವವಾಗಿ ಪತ್ತೆ

Update: 2020-09-23 14:51 GMT

ಹಾವೇರಿ, ಸೆ.23: ತುಂಗಭದ್ರಾ ನದಿಗೆ ಮರಳು ತರಲು ಹೋಗಿದ್ದ ವೇಳೆ ನೀರಿನಲ್ಲಿ ಕೊಚ್ಚಿಹೋಗಿದ್ದ ಯುವಕರಿಬ್ಬರು ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ.

ರಾಣೇಬೆನ್ನೂರು ತಾಲೂಕಿನ ಸೋಮಲಾಪುರ ಗ್ರಾಮದ ಬಳಿ ಸೆ.21ರಂದು ಕೊಚ್ಚಿ ಹೋಗಿದ್ದ ಇಬ್ಬರೂ ಯುವಕರು ಶವವಾಗಿ ಪತ್ತೆಯಾಗಿದ್ದು. ಮೃತರನ್ನು ಜಗದೀಶ್ ಐರಣಿ (25), ಬೆಟ್ಟಪ್ಪ ಮಿಳ್ಳಿ (25) ಎಂದು ಗುರುತಿಸಲಾಗಿದೆ.

ಅರೆಮಲ್ಲಾಪುರ ಗ್ರಾಮದ ನಿವಾಸಿಗಳಾದ ಈ ಇಬ್ಬರು ಯುವಕರು ರಾತ್ರೋರಾತ್ರಿ ಮರಳು ತರುವ ಸಲುವಾಗಿ ತುಂಗಭದ್ರಾ ನದಿಗೆ ತೆರಳಿದ್ದರು. ಎಷ್ಟು ಸಮಯವಾದರೂ ಅವರು ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ನದಿಯ ಬಳಿ ಹೋಗಿ ನೋಡಿದಾಗ ನದಿ ಮಧ್ಯೆ ಸಿಲುಕಿದ್ದ ಎತ್ತಿನ ಬಂಡಿಗಳು ಮಾತ್ರ ಕಂಡು ಬಂದಿದ್ದವು.

ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ತುಂಗಭದ್ರಾ ಮತ್ತು ವರದಾ ನದಿಗಳು ತುಂಬಿ ಹರಿಯುತ್ತಿದ್ದು, ನದಿ ರಭಸಕ್ಕೆ ಯುವಕರು ಕೊಚ್ಚಿಹೋಗಿರಬಹುದೆಂಬ ಅನುಮಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಕೊಚ್ಚಿ ಹೋಗಿದ್ದವರಿಗಾಗಿ ಶೋಧನಾ ಕಾರ್ಯಾಚರಣೆ ಆರಂಭಿಸಿದ್ದರು.

ಬುಧವಾರ ಸುಮಾರು 9 ಕಿ.ಮೀ ಅಂತರದಲ್ಲಿ ಈ ಇಬ್ಬರ ಶವಗಳನ್ನು ಸಿಬ್ಬಂದಿ ಹೊರ ತೆಗೆದಿದ್ದಾರೆ. ನದಿಯ ಬಳಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಕುರಿತು ರಾಣೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News