ವಿಧಾನಸಭೆಯಲ್ಲಿ ಭಾರೀ ಗದ್ದಲ, ಕೋಲಾಹಲಕ್ಕೆ ಕಾರಣವಾದ ರಮೇಶ್‍ ಕುಮಾರ್ ಪದಬಳಕೆ

Update: 2020-09-23 15:00 GMT

ಬೆಂಗಳೂರು, ಸೆ. 23: `ದೊಡ್ಡ ಮನುಷ್ಯರು, ಬೃಹಸ್ಪತಿಗಳೆಲ್ಲ ಒಟ್ಟಿಗೆ ಸೇರಿ `ಹಲ್ಕಾ ಕೆಲಸ' ಮಾಡಿದರೆ ಸರಿಯೇ?' ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್‍ ಕುಮಾರ್ ಬಳಸಿದ ಪದ ವಿಧಾನಸಭೆಯಲ್ಲಿ ಕೆಲಕಾಲ ಭಾರೀ ಗದ್ದಲ, ಕೋಲಾಹಲ, ಏರಿದ ಧ್ವನಿಯಲ್ಲಿ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಯಿತು.

ಬುಧವಾರ ವಿಧಾನಸಭೆಯಲ್ಲಿ ಕೊರೋನ ನಿಯಂತ್ರಣದಲ್ಲಿ ಸರಕಾರದ ವೈಫಲ್ಯ ಮತ್ತು ವೈದ್ಯಕೀಯ ಉಪಕರಣ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ನೀಡಿದ ಸುದೀರ್ಘ ಉತ್ತರದ ಹಿನ್ನೆಲೆಯಲ್ಲಿ ಮಧ್ಯದಲ್ಲಿ ಎದ್ದುನಿಂತ ರಮೇಶ್ ಕುಮಾರ್, `ನಮ್ಮ ತಾಳ್ಮೆಗೂ ಮಿತಿ ಇದೆ. ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರವನ್ನು ಸಚಿವರು ಸಮರ್ಥಿಸುತ್ತಿದ್ದು, ವಿಪಕ್ಷಗಳ ಆರೋಪಗಳನ್ನು ನಿರಾಕರಿಸುತ್ತಿಲ್ಲ. ಉಪಕರಣ ಖರೀದಿಗೆ ಸಮಿತಿಗಳನ್ನು ರಚನೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಸಮಿತಿಯಲ್ಲಿರುವ ದೊಡ್ಡವರು, ಏನು ಕೆಲಸ ಮಾಡಿದರೂ ಸರಿಯೇ?' ಎಂದು ಖಾರವಾಗಿ ಪ್ರಶ್ನಿಸಿದರು.

ಇದರಿಂದ ಕೆರಳಿದ ಸುಧಾಕರ್, 'ಮಾಜಿ ಸ್ಪೀಕರ್ ಆಗಿದ್ದವರು ಈ ರೀತಿಯಲ್ಲಿ ಕೆಟ್ಟಪದ ಬಳಕೆ, ಮನಸೋ ಇಚ್ಛೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಇವರಿಗೆ ನೈತಿಕತೆ ಇದೆಯೇ, ತಮ್ಮ ಮಾತಿನ ಮೇಲೆ ನಿಗಾ ಇದೆಯೇ' ಎಂದು ಏರಿದ ಧ್ವನಿಯಲ್ಲಿ ಆಕ್ರೋಶ ಹೊರಹಾಕಿದರು. ಇದಕ್ಕೆ ಧ್ವನಿಗೂಡಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, 'ರಮೇಶ್ ಕುಮಾರ್ ಅವರಿಗೆ ನಾವು ಆ ಪದವನ್ನು ಬಳಕೆ ಮಾಡಬಹುದೇ? ಇಂತಹ ಅಸಂಸದೀಯ ಪದ ಬಳಕೆ ಮಾಡಿದ್ದು ಸರಿಯಲ್ಲ. ಕೂಡಲೇ ಅವರು ತಮ್ಮ ಪದವನ್ನು ಹಿಂಪಡೆದು, ಕ್ಷಮಾಪಣೆ ಕೇಳಬೇಕು' ಎಂದು ಪಟ್ಟು ಹಿಡಿದರು.

ಈ ವೇಳೆ ಎದ್ದುನಿಂತ ರಮೇಶ್ ಕುಮಾರ್, `ನಾನು ಉದ್ವೇಗದಲ್ಲಿ ಈ ಪದವನ್ನು ಬಳಸಿರಬಹುದು. ನನಗೆ ಯಾವುದೇ ಪ್ರತಿಷ್ಠೆ ಇಲ್ಲ. ನಾನು ಬಳಸಿದ ಪದ ಸಂಸದೀಯವೋ, ಅಸಂಸದೀಯವೋ ಎಂಬುದರ ಕುರಿತು ಸ್ಪೀಕರ್ ಸ್ಪಷ್ಟನೆ ನೀಡಲಿ. ಅವರ ನಿರ್ದೇಶನದಂತೆ ನಾನು ನಡೆದುಕೊಳ್ಳುವೆ' ಎಂದರು. ಇದರಿಂದ ಮತ್ತಷ್ಟು ಕೆರಳಿದ ಆಡಳಿತ ಪಕ್ಷದ ಸದಸ್ಯರು `ಸ್ಪೀಕರ್ ಸ್ಥಾನದಲ್ಲಿ ಕೂತು ಕೆಲಸ ಮಾಡಿದವರು ಮನಸೋ ಇಚ್ಛೆ ಪದ ಬಳಕೆ ಮಾಡುವುದು ಅವರಿಗೆ ಶೋಭೆಯಲ್ಲ' ಎಂದು ವಾಗ್ವಾದಕ್ಕೆ ಮುಂದಾದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ರಮೇಶ್ ಕುಮಾರ್ ಅವರು ಬಳಕೆ ಮಾಡಿದ ಪದ ಸರಿಯಲ್ಲ. ಅವರು ಕೂಡಲೇ ಆ ಪದವನ್ನು ವಾಪಸ್ ಪಡೆಯಬೇಕು ಮತ್ತು ಅವರು ಕ್ಷಮಾಪಣೆ ಕೇಳಬೇಕು ಎಂದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಧ್ವನಿಗೂಡಿಸಿದರು. ಈ ವೇಳೆ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ಗದ್ದಲ, ಕೋಲಾಹಲ ನಡೆಯಿತು.

ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸುಳಿವನ್ನರಿತ ಸ್ಪೀಕರ್ ಕಾಗೇರಿ, `ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು ಬಳಸಿದ ಪದ ಸಂಸದೀಯವೋ ಅಥವಾ ಅಸಂಸದೀಯವೋ ಎಂಬುದನ್ನು ನಾನು ಪರಿಶೀಲನೆ ನಡೆಸುತ್ತೇನೆ. ಆದರೆ, ಈ ಸಂದರ್ಭದಲ್ಲಿ ಅವರು ಬಳಸಿದ ಪದ ಸೌಜನ್ಯದ ಪದ ಖಂಡಿತ ಅಲ್ಲ. ನಾನು ವೈಯಕ್ತಿಕವಾಗಿ ಹೇಳುವೆ ಅವರು ಬಳಸಿದ್ದು, ಒಳ್ಳೆಯ ಶಬ್ದವಂತೂ ಅಲ್ಲ ಎಂದರು.

ಆಗ ರಮೇಶ್ ಕುಮಾರ್, `ನನ್ನ ಬಗ್ಗೆ ಈಶ್ವರಪ್ಪನವರು ಒಳ್ಳೆಯ ಮಾತುಗಳನ್ನಾಡಿದ್ದಾರೆ. ನನಗೇನೂ ಪ್ರತಿಷ್ಠೆ ಇಲ್ಲ. ನಾನು ಉದ್ವೇಗದಲ್ಲಿ ಆ ಪದ ಬಳಕೆ ಮಾಡಿದ್ದರೆ ಕ್ಷಮೆ ಕೇಳುವೆ. ಆದರೆ, ನಮ್ಮ ತಾಳ್ಮೆಗೂ ಮಿತಿ ಇದೆ. ಅವರು ಹೇಳಿದ್ದನ್ನೆಲ್ಲ ನಾವು ಕೇಳಲು ಆಗುವುದಿಲ್ಲ. ಉಪಕರಣ ಖರೀದಿ ಅವ್ಯವಹಾರವನ್ನು ಸಚಿವರು ನಿರಾಕರಿಸಿಲ್ಲ, ಬದಲಿಗೆ ಸಮರ್ಥಿಸುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಉನ್ನತ ಸಮಿತಿಯಲ್ಲಿದ್ದ ಬೃಹಸ್ಪತಿಗಳೇ, ಉತ್ಕೃಷ್ಟ ದೇಶಭಕ್ತರೇ' ಎಂದು ಪ್ರಶ್ನಿಸಿದರು.

ಈ ಹಿಂದೆ ಗೋಪಾಲಗೌಡರು ಮತ್ತು ಜೆ.ಎಚ್.ಪಟೇಲ್ ಅವರು ಸರಕಾರವನ್ನು ಟೀಕಿಸಲು ಬಳಸಿದ ಪದಗಳನ್ನು ನೋಡಿ ಎಂದ ರಮೇಶ್ ಕುಮಾರ್, ನಾನು ಹೇಳಿದ್ದು ಸರಿ ಎನ್ನುವುದಿಲ್ಲ. ಆದರೆ, ಇಂತಹ ಕೆಲಸ ಮಾಡಿದರೆ ಏನೆಂದು ಕರೆಯಬೇಕು ಎಂದು ನೀವೇ ಒಂದು ಪದವನ್ನು ನನಗೆ ಕೊಡಿ. ನಾನು ಅದೇ ಪದವನ್ನು ಬಳಕೆ ಮಾಡುತ್ತೇನೆ ಎಂದರು.

ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ಕಾಗೇರಿ, ರಮೇಶ್ ಕುಮಾರ್ ಅವರು ಬಳಸಿದ ಪದವನ್ನು ಕಡತದಿಂದ ತೆಗೆದು ಹಾಕಲು ಸೂಚಿಸಿ, ರೂಲಿಂಗ್ ನೀಡಿ ಗದ್ದಲಕ್ಕೆ ತೆರೆ ಎಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News