ಕೊರೋನ ನಿಯಂತ್ರಣದಲ್ಲಿ ವೈಫಲ್ಯ ಆರೋಪ: ಸಚಿವರ ಸುಧಾಕರ್ ರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ ಕಾಂಗ್ರೆಸ್ ಸದಸ್ಯರು

Update: 2020-09-23 16:01 GMT

ಬೆಂಗಳೂರು, ಸೆ. 23: ವೈದ್ಯಕೀಯ ಉಪಕರಣ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಹಾಗೂ ಕೊರೋನ ಸೋಂಕು ನಿಯಂತ್ರಿಸುವಲ್ಲಿನ ರಾಜ್ಯ ಸರಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳ ಸದಸ್ಯರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬಿಟ್ಟು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಬುಧವಾರ ವಿಧಾನಸಭೆಯಲ್ಲಿ ವಿಪಕ್ಷಗಳ ಆರೋಪಕ್ಕೆ ಸುಧಾಕರ್ ಉತ್ತರ ನೀಡುತ್ತಿದ್ದ ವೇಳೆ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್‍ನ ಯು.ಟಿ.ಖಾದರ್, ಡಾ.ಯತೀಂದ್ರ, ತುಕಾರಾಂ, ಪ್ರಿಯಾಂಕ್ ಖರ್ಗೆ, ರಿಝ್ವಾನ್ ಅರ್ಶದ್, ಸೌಮ್ಯಾರೆಡ್ಡಿ, ಅಂಜಲಿ ನಿಂಬಾಳ್ಕರ್, ಲಕ್ಷ್ಮಿ ಹೆಬ್ಬಾಳ್ಕರ್, ಡಾ.ರಂಗನಾಥ್, ಡಾ.ಅಜಯ್‍ಸಿಂಗ್ ಸೇರಿದಂತೆ ಇನ್ನಿತರ ಸದಸ್ಯರು, ಸುಧಾಕರ್ ಅವರನ್ನು ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿಸಿದರು.

ಬಳಿಕ ಪ್ರತಿಕ್ರಿಯಿಸಿದ ಸುಧಾಕರ್, `ಲಾಕ್‍ಡೌನ್ ಸಡಿಲಗೊಳಿಸಿದ ಬಳಿಕ ಸರಕಾರ ಹೊರ ರಾಜ್ಯದಿಂದ ವಲಸೆ ಕಾರ್ಮಿಕರನ್ನು ಕರೆತರುವ ಕೆಲಸ ಮಾಡಿದೆ. ಸೋಂಕು ಹೆಚ್ಚಾಗಿದ್ದ ರಾಜ್ಯಗಳಿಂದಲೇ ಹೆಚ್ಚಾಗಿ ಕಾರ್ಮಿಕರು ಬಂದಿದ್ದು, ಕನ್ನಡಿಗರನ್ನು ಕರೆತರುವ ಪ್ರಯತ್ನ ಸರಕಾರ ನಡೆಸಿತು ಎಂದು ಸಮರ್ಥಿಸಿದರು. ಇದರಿಂದ ಕೆರಳಿದ ಪ್ರಿಯಾಂಕ್ ಖರ್ಗೆ, `ಮಾರ್ಚ್ ತಿಂಗಳಲ್ಲಿಯೇ ವಲಸೆ ಕಾರ್ಮಿಕರನ್ನು ಕರೆ ತರುವ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲಾಯಿತು. ಗಡಿಭಾಗದಲ್ಲಿಯೇ ತಪಾಸಣೆ ಮಾಡಿ ಕ್ವಾರಂಟೈನ್ ಮಾಡುವ ಬಗ್ಗೆ ಸಲಹೆ ನೀಡಿದರೂ ಸರಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ' ಎಂದು ವಾಗ್ಬಾಣ ಬಿಟ್ಟರು.

`ಸಂಕಷ್ಟಕ್ಕೆ ಸಿಲುಕಿರುವ ಸಮುದಾಯಗಳಿಗೆ ವಿಶೇಷ ಪ್ಯಾಕೇಜ್ ವಿಚಾರದಲ್ಲಿ ಕೇರಳದಲ್ಲಿ 20ಸಾವಿರ ಕೋಟಿ ರೂ. ಘೋಷಣೆ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಕೇವಲ ಘೋಷಣೆ ಮಾಡಲಾಗಿದೆ. ಆದರೆ, ಜನರಿಗೆ ಈವರೆಗೂ ಹಣ ತಲುಪಲಿಲ್ಲ ಎಂದು ಹಿರಿಯ ಸದಸ್ಯ ಈ.ತುಕರಾಂ ಗಮನ ಸೆಳೆದರು. ಇದಕ್ಕೆ ಧ್ವನಿಗೂಡಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಸರಕಾರ ಈ ಬಗ್ಗೆ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಜೆಡಿಎಸ್ ಸದಸ್ಯ ಶ್ರೀನಿವಾಸಗೌಡ, ಸುಧಾಕರ್ ಅವರು ಕಾಂಗ್ರೆಸ್ ಬಿಟ್ಟು ಹೋಗಿದ್ದಾರೆಂದು ಅವರ ಮೇಲೆ ಇವರಿಗೆ(ಕಾಗ್ರೆಸ್‍ನವರಿಗೆ) ಕೋಪ ಜಾಸ್ತಿ, ಹೀಗಾಗಿ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆಂದು ಚಟಾಕಿ ಹಾರಿಸಿದರು. ಆಗ ಸುಧಾಕರ್, ಕೋಪ ಇರುವ ಕಡೆ ಪ್ರೀತಿಯು ಇರುತ್ತದೆ ಎಂದು ಮಸಾಲೆ ಬೆರೆಸಿದ್ದರಿಂದ ಗದ್ದಲ ತಿಳಿಯಾಯಿತು. ಬಳಿಕ ಸುಧಾಕರ್ ತಮ್ಮ ಉತ್ತರವನ್ನು ಮುಂದುವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News