'ಶುಚಿ’ ಯೋಜನೆ ನಿಲ್ಲಿಸಿದ ಸರಕಾರದ ನಡೆ ಖಂಡನೀಯ: ಜನವಾದಿ ಮಹಿಳಾ ಸಂಘಟನೆ

Update: 2020-09-23 16:34 GMT

ಬೆಂಗಳೂರು, ಸೆ.23: ರಾಜ್ಯ ಸರಕಾರವು ಸಂಪನ್ಮೂಲ ಕೊರತೆಯ ನೆಪ ಮುಂದೊಡ್ಡಿ ‘ಶುಚಿ' ಯೋಜನೆಯನ್ನು ನಿಲ್ಲಿಸಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಸರಕಾರದ ಈ ಮಹಿಳಾ ವಿರೋಧಿ ನಡೆ ಖಂಡನೀಯ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತಿಳಿಸಿದೆ.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಜಂಟಿ ನಿರ್ದೇಶಕರು ಯೋಜನೆಯ ಫಲಾನುಭವಿಗಳಾಗಿದ್ದ ಹದಿ ಹರೆಯದ ಹೆಣ್ಣು ಮಕ್ಕಳಿಗೆ ಇದರಿಂದ ತೊಂದರೆಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ ಮತ್ತು ಹೊಸ ಪ್ರಸ್ತಾಪವನ್ನು ಸರಕಾರದ ಮುಂದಿರಿಸುವ ಸಿದ್ಧತೆ ಮಾಡಲಾಗುತ್ತಿದೆ ಎಂದು ಹೇಳಿದ ಹೇಳಿಕೆಯೂ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಸಂಘಟನೆಯ ಅಧ್ಯಕ್ಷೆ ದೇವಿ ಹಾಗೂ ಪ್ರಧಾನ ಕಾರ್ಯದರ್ಶಿ ಗೌರಮ್ಮ ತಿಳಿಸಿದ್ದಾರೆ.

2013-14ನೆ ಸಾಲಿನಲ್ಲಿ ಕೇಂದ್ರ ಸರಕಾರದ ಪ್ರಾಯೋಜನೆ ಅಡಿಯಲ್ಲಿ ಈ ಯೋಜನೆ ಪ್ರಾರಂಭವಾಗಿತ್ತು. ನಂತರ ರಾಜ್ಯ ಸರಕಾರಗಳಿಗೆ ಮುಂದುವರಿಸುವ ಹೊಣೆಯನ್ನು ವರ್ಗಾಯಿಸಲಾಯಿತು. ಈ ಯೋಜನೆಯ ಪ್ರಯೋಜನವನ್ನು ಆರ್ಥಿಕವಾಗಿ ಶಕ್ತರಲ್ಲದ ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಿಗೆ ಸೇರಿದ ಸುಮಾರು 17 ಲಕ್ಷ ಶಾಲಾ ಕಾಲೇಜಿನ ಬಾಲಕಿಯರು ಪಡೆದುಕೊಳ್ಳುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಇದಕ್ಕೆ ರಾಜ್ಯ ಸರಕಾರ ವೆಚ್ಚ ಮಾಡುತ್ತಿದ್ದ ಕೇವಲ 49 ಕೋಟಿ ರೂ.ಗಳ ವೆಚ್ಚವನ್ನು ಸಂಪನ್ಮೂಲದ ಕೊರತೆಯ ನೆಪದಲ್ಲಿ ನಿಲ್ಲಿಸಲಾಗಿದೆ. ಬಜೆಟ್ ಮಂಡನೆಯ ಸಮಯದಲ್ಲಿಯೆ ಇದನ್ನು ಕಡಿತ ಮಾಡಲಾಗಿದೆ ಎಂಬುದು ಅತ್ಯಂತ ಆಘಾತಕಾರಿ ಸಂಗತಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಸರ್ಗ ಸಹಜವಾದ ಮುಟ್ಟು ಅದನ್ನು ಮೈಲಿಗೆ ಎಂದೇ ಸಮಾಜ ಈಗಲೂ ಪರಿಗಣಿಸುತ್ತಿದೆ. ಪ್ರೌಢಾವಸ್ಥೆಗೆ ಬಂದ ಬಾಲಕಿಯರ ಶಿಕ್ಷಣ ಮುಂದುವರಿಕೆಗೆ ತಿಂಗಳ ಮುಟ್ಟಿನ ಸಮಸ್ಯೆ ಕೂಡಾ ಒಂದು ಕಾರಣ ಎಂಬುದು ಇಲಾಖೆಗೆ ಹಾಗು ಸರಕಾರಕ್ಕೆ ಗೊತ್ತಿರಬೇಕು. ಹಾಗೆಯೇ ಮುಟ್ಟಿನ ಸಂದರ್ಭದಲ್ಲಿ ಶುಚಿತ್ವ ಕೂಡಾ ಬಹಳ ಮುಖ್ಯವೆಂಬುದನ್ನು ಯಾರೂ ಕಡೆಗಣಿಸುವಂತಿಲ್ಲ. ಇಂಥಹ ಸೌಲಭ್ಯಗಳನ್ನು ಕಿತ್ತು ಹಾಕಿದರೆ ಕಿಶೋರಿ ಸ್ವಾಸ್ಥ್ಯ ದಂತಹ ಯೋಜನೆಗಳು ನೆಪ ಮಾತ್ರಕ್ಕೆ ಇರುತ್ತವೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆಯೂ ಕೋವಿಡ್ ಪರಿಹಾರದ ವೆಚ್ಚದ ಹೆಸರಿನಲ್ಲಿ ಸಾಂತ್ವನ ಮತ್ತು ಮಾತೃ ವಂದನಾ ಕಾರ್ಯಕ್ರಮ ಗಳಿಗೆ ಸಹಾಯ ನಿಲ್ಲಿಸುವ ಪ್ರಸ್ತಾಪ ಸ್ವತಃ ಮುಖ್ಯಮಂತ್ರಿಗಳೇ ಮಾಡಿದ್ದನ್ನು ನೆನಪಿಸಿಕೊಳ್ಳಬೇಕು. ಹೋರಾಟದ ಮೂಲಕ ಪಡೆದ ಅಲ್ಪ ಸ್ವಲ್ಪ ಸೌಲಭ್ಯಗಳನ್ನು ಹೀಗೆ ಕಿತ್ತುಕೊಳ್ಳುವುದು ಮಹಿಳಾ ವಿರೋಧಿ ಕ್ರಮ ಎಂದು ಆಗಲೂ ಜನವಾದಿ ಮಹಿಳಾ ಸಂಘಟನೆ ಖಂಡನೆ ಮಾಡಿತ್ತು. ಮತ್ತು ಆ ಯೋಜನೆಯನ್ನು ಮುಂದುವರಿಸಲು ಸಂಬಂಧಿಸಿದ ಇಲಾಖೆಗಳಿಗೆ ಮನವಿಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇಂತಹ ಒಂದೊಂದೆ ಕ್ರಮಗಳ ಮೂಲಕ ಮಹಿಳೆಯರಿಗೆ ಇರುವ ಅಲ್ಪಸ್ವಲ್ಪ ಸೌಲಭ್ಯಗಳನ್ನು ಕಸಿದು ಕೊಳ್ಳುವ ಹುನ್ನಾರವನ್ನು ರಾಜ್ಯ  ಬಿಜೆಪಿ ಸರಕಾರ ಮಾಡುತ್ತಿದೆ. ಇದು ಮಹಿಳಾ ವಿರೋಧಿ ನಡೆ ಹಾಗೂ ಖಂಡನೀಯ ಕ್ರಮವೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಭಾವಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರಕಾರದಿಂದ ನ್ಯಾಯವಾಗಿ ನಮಗೆ ಬರಬೇಕಿರುವ ಜಿ.ಎಸ್.ಟಿ ಮತ್ತು ಕೋವಿಡ್ ಪರಿಹಾರದ ಹಣವನ್ನು ಅಧಿಕಾರಯುತವಾಗಿ ಕೇಳಿ ಪಡೆದುಕೊಳ್ಳುವ ಬದಲು ಮಹಿಳೆಯರಿಗೆ ಕೊಡುವ ಸೌಲಭ್ಯಗಳನ್ನು ಹಿಂತೆಗೆದುಕೊಳ್ಳಬಾರದೆಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಜಾಹಿರಾತುಗಳಿಗೆ ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡುವುದಕ್ಕೆ ಕಡಿವಾಣ ಹಾಕಬೇಕು. ಶುಚಿ ಯೋಜನೆಗೆ ತಕ್ಷಣ ಹಣ ರಿಲೀಸ್ ಮಾಡಬೇಕೆಂದು ದೇವಿ ಹಾಗೂ ಗೌರಮ್ಮ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News