ಸಿವಿಲ್ ಪೊಲೀಸ್ ಪರೀಕ್ಷೆ ದೋಷಪೂರಿತ: ಕೃಪಾಂಕ ನೀಡಲು ಕಸಾಪ ಆಗ್ರಹ

Update: 2020-09-23 16:58 GMT
ಮನು ಬಳಿಗಾರ್

ಬೆಂಗಳೂರು, ಸೆ.23: ಸಿವಿಲ್(ನಾಗರಿಕ) ಪೊಲೀಸ್ ಸಾಮಾನ್ಯ ಪ್ರವೇಶ ಪ್ರಶ್ನೆ ಪತ್ರಿಕೆ ದೋಷಪೂರಿತದಿಂದ ಕೂಡಿರುವ ಹಿನ್ನೆಲೆಯಲ್ಲಿ ಪರೀಕ್ಷೆ ಬರೆದ ಎಲ್ಲರಿಗೂ ಕೃಪಾಂಕ ನೀಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಸರಕಾರವನ್ನು ಒತ್ತಾಯಿಸಿದೆ.

ಸಿವಿಲ್ (ನಾಗರಿಕ) ಪೊಲೀಸ್ ಸಿಬ್ಬಂದಿ ನೇಮಕಕ್ಕಾಗಿ ಸೆ.20 ರಂದು ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ನೀಡಿದ್ದ ಪ್ರಶ್ನೆ ಪತ್ರಿಕೆಯು ದೋಷಪೂರಿತವಾಗಿದೆ. ಈ ಪ್ರಶ್ನೆ ಪತ್ರಿಕೆ ಕನ್ನಡ ಲಿಪಿಯಲ್ಲಿ ಇದೆ. ಉಳಿದಂತೆ ಮುಕ್ಕಾಲು ಭಾಗ ಅಂಶಗಳು ಇಂಗ್ಲಿಷ್‍ಮಯವಾಗಿವೆ. ಇಂಗ್ಲಿಷ್ ಪ್ರಶ್ನೆಯನ್ನು ಕನ್ನಡದಲ್ಲಿ ಬರೆದಿದ್ದಾರೆ. ಹೆಸರಿಗಷ್ಟೇ ಕನ್ನಡದಲ್ಲಿರುವಂತೆ ಈ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡವನ್ನು ಕ್ರಿಯಾಪದದ ಮಟ್ಟದಲ್ಲಿ ಮಾತ್ರ ಬಳಸಲಾಗಿದೆ. ಉಳಿದ ಇಡೀ ವಾಕ್ಯ ಭಾಗ ಇಂಗ್ಲಿಷ್‍ನಲ್ಲಿ ಇದೆ. ಈ ಪ್ರಶ್ನೆ ಪತ್ರಿಕೆಯನ್ನು ತಯಾರಿಸಿ ಅಭ್ಯರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತರಿಸಲು ಕೊಟ್ಟಿದ್ದು ಬೇಜವಾಬ್ದಾರಿಯಿಂದ ಕೂಡಿದ್ದಾಗಿದೆ.

ಇದು ಕನ್ನಡದ ಬಗ್ಗೆ ಇರುವ ತಾತ್ಸಾರ ಭಾವನೆಯನ್ನು ತೋರಿಸುತ್ತದೆ. ಇದನ್ನು ಕನ್ನಡ ಸಾಹಿತ್ಯ ಪರಿಷತ್ತು ಸಹಿಸಲು ಸಾಧ್ಯವಿಲ್ಲ. ಕರ್ನಾಟಕ ರಾಜ್ಯ ರಚನೆಯಾಗಿ ಆರೂವರೆ ದಶಕಗಳು ಕಳೆದರೂ ಅತ್ಯಂತ ಕನಿಷ್ಠ ಮಟ್ಟದ ಒಂದು ಪರೀಕ್ಷೆಯನ್ನೂ ಕನ್ನಡದಲ್ಲಿ ನಡೆಸಲಾರದಂತಹ ಸ್ಥಿತಿ ಬಂದಿರುವುದು ದುರದೃಷ್ಟಕರವಾಗಿದೆ.

ಇಂಗ್ಲಿಷ್‍ನಲ್ಲಿದ್ದ ಈ ಪ್ರಶ್ನೆ ಪತ್ರಿಕೆಯನ್ನು ಗ್ರಾಮೀಣ ಭಾಗದಿಂದ ಬಂದ ಅಭ್ಯರ್ಥಿಗಳು ಹೇಗೆ ಉತ್ತರಿಸಿದ್ದಾರೋ ತಿಳಿಯದು. ಅವರಿಗೆ ಕೃಪಾಂಕಗಳನ್ನು ಕೊಡುವ ಮೂಲಕ ನ್ಯಾಯ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗೃಹ ಸಚಿವ, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹಾಗೂ ಗೃಹ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ ಎಂದು ಪ್ರಕಟನೆಯಲ್ಲಿ ಕಸಾಪ ಅಧ್ಯಕ್ಷ ಮನು ಬಳಿಗಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News