ರೈತ, ಕಾರ್ಮಿಕರ ಬಂದ್‍ ಕರೆಗೆ ಡಿವೈಎಫ್‍ಐ ಬೆಂಬಲ

Update: 2020-09-23 16:59 GMT

ಬೆಂಗಳೂರು, ಸೆ.23: ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಬಲವಂತವಾಗಿ ಜಾರಿಗೆ ತರುತ್ತಿರುವ ಬಿಜೆಪಿ ಸರಕಾರದ ನೀತಿಗಳನ್ನು ಪ್ರತಿಭಟಿಸಿ ರೈತ, ಕಾರ್ಮಿಕ ಸಂಘಟನೆಗಳು ಸೆ.25 ರಂದು ಕರೆ ನೀಡಿರುವ ಭಾರತ್ ಬಂದ್‍ಗೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್‍ಐ) ಬೆಂಬಲ ವ್ಯಕ್ತಪಡಿಸಿದೆ.

ರೈತರು, ಕಾರ್ಮಿಕರ ಬದುಕಿಗೆ ಸಂಬಂಧಿಸಿದ ಮಸೂದೆಗಳನ್ನು ಮೋದಿ ಸರಕಾರ ಯಾವುದೇ ಚರ್ಚೆಗಳಿಲ್ಲದೆ ಅಂಗೀಕರಿಸುತ್ತಿದೆ. ಇದರಿಂದ ಕಾರ್ಮಿಕರನ್ನು ಯಾವುದೇ ಪ್ರತಿರೋಧಗಳಿಲ್ಲದೆ ಕೆಲಸಗಳಿಂದ ಕಿತ್ತು ಹಾಕಲು, ಸವಲತ್ತುಗಳನ್ನು ನಿರಾಕರಿಸಲು ಮಾಲಕರಿಗೆ ಅನುಕೂಲ ಒದಗಿಸಿದೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮಸೂದೆಗಳಂತೂ ರೈತರನ್ನು ಪೂರ್ಣವಾಗಿ ಕಾರ್ಪೋರೇಟ್ ಶಕ್ತಿಗಳಿಗೆ ಶರಣಾಗುವಂತೆ ರೂಪಿಸಲಾಗಿದೆ.

ಈ ಕಾಯ್ದೆಗಳು ರೈತರನ್ನು ಮಾತ್ರವಲ್ಲದೆ ಜನ ಸಾಮಾನ್ಯರ ಆಹಾರದ ಹಕ್ಕಿನ ಮೇಲೆಯೂ ದಾಳಿ ನಡೆಸುತ್ತದೆ. ಇಂತಹ ಮಸೂದೆಗಳನ್ನು ಯಾವುದೇ ಚರ್ಚೆಗಳಿಲ್ಲದೆ, ಸರ್ವಾಧಿಕಾರಿ ನಡೆಗಳ ಮೂಲಕ ಅಂಗೀಕರಿಸಿರುವುದು ದೇಶದ ಭವಿಷ್ಯದ ನಿಟ್ಟಿನಲ್ಲಿ ಅಪಾಯಕಾರಿ. ನಿರುದ್ಯೋಗದಿಂದ ಯುವ ಜನತೆ ಬೀದಿಗೆ ಬೀಳುತ್ತಿರುವ ಸಂದರ್ಭದಲ್ಲಿ ರೈತರ, ಕಾರ್ಮಿಕರ ಮೇಲೂ ಗದಾಪ್ರಹಾರ ನಡೆಸಲು ಸರಕಾರ ಮುಂದಾಗಿದೆ.

ದೇಶವನ್ನು ಪೂರ್ಣವಾಗಿ ಕಾರ್ಪೋರೇಟ್ ಬಂಡವಾಳದಾರರ ಕಪಿಮುಷ್ಟಿಯಲ್ಲಿ ಸಿಲುಕಿಸಲಿದೆ. ಇಂತಹ ಆತಂಕಕಾರಿ ವಿದ್ಯಮಾನದ ವಿರುದ್ದ ರೈತರು, ಕಾರ್ಮಿಕರು ನಡೆಸುತ್ತಿರುವ ಹೋರಾಟವನ್ನು ರಾಜ್ಯದ ಯುವ ಜನತೆ ದೃಢವಾಗಿ ಬೆಂಬಲಿಸಬೇಕು, ರಾಜ್ಯಾದ್ಯಂತ ನಡೆಯುವ ಹೆದ್ದಾರಿ ತಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬೆಂಬಲ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News