ರೈತರ ಹೋರಾಟ ಹತ್ತಿಕ್ಕಲು ವಿದ್ಯುತ್ ಕಡಿತಗೊಳಿಸಿದ ಬಿ.ಸಿ.ಪಾಟೀಲ್: ಪ್ರೊ.ಮಹೇಶ್ ಚಂದ್ರಗುರು ಆರೋಪ

Update: 2020-09-23 17:22 GMT

ಮೈಸೂರು,ಸೆ.23: ಭೂ ಸುಧಾರಣೆ ಕಾಯ್ದೆ ಸೇರಿದಂತೆ ಹಲವು ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭನೆ ನಡೆಸುತ್ತಿರುವ ರೈತ-ದಲಿತ-ಕಾರ್ಮಿಕರ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಕೃಷಿ ಸಚಿವ ಬಿ.ಸಿ.ಪಾಟೀಲರು ವಿದ್ಯುಚ್ಛಕ್ತಿ ಕಡಿತಗೊಳಿಸುವ ಮೂಲಕ ಅವಿವೇಕದ ನಡೆಯನ್ನು ಅನುಸರಿಸಿದ್ದಾರೆ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತ ಕುಟುಂಬದಿಂದಲೇ ಬಂದಿರುವ ನಾಡಿನ ಕೃಷಿ ಸಚಿವರಾದ ಬಿ.ಸಿ.ಪಾಟೀಲರು ರೈತರ ಮನೆ ಬಳಿಗೆ ಬಂದು ಅವರ ಸಂಕಷ್ಟಗಳನ್ನು ಅರಿತು ರೈತರ ಕಲ್ಯಾಣಕ್ಕೆ ಪೂರಕವಾದ ಕ್ರಿಯಾಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಳ್ಳುವಂತೆ ನೋಡಿಕೊಳ್ಳಬೇಕಿತ್ತು. ಆದರೆ ಅವರು ತನಗೆ ಪ್ರಾಪ್ತಿಯಾಗಿರುವ ರಾಜ್ಯಾಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಅಹಿಂಸಾತ್ಮಕ ಹಾಗೂ ಜವಾಬ್ದಾರಿಯುತ ಪ್ರಜಾಸತ್ತಾತ್ಮಕ ಹೋರಾಟವನ್ನು ಕುಂಠಿತಗೊಳಿಸುವಲ್ಲಿ ವಿದ್ಯುಚ್ಛಕ್ತಿಯನ್ನು ಕಡಿತಗೊಳಿಸಿ ಅವರ ಸುರಕ್ಷತೆಗೆ ಧಕ್ಕೆ ತಂದಿರುವುದು ಅವಿವೇಕದ ಕೃತ್ಯವಾಗಿದೆ ಎಂದು ಹೇಳಿದರು.

ಕರ್ನಾಟಕ ಸರ್ಕಾರ ಜಾರಿಗೊಳಿಸಲು ಹೊರಟಿರುವ ಕೃಷಿ ಮಸೂದೆ ರೈತರನ್ನು ಕೃಷಿ ಕ್ಷೇತ್ರದಿಂದ ಒಕ್ಕಲೆಬ್ಬಿಸಿ ದಿವಾಳಿತನದೆಡೆಗೆ ದಬ್ಬುವ ಕುತಂತ್ರವಾಗಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಭೂ ಮಾಲಕತ್ವವನ್ನು ನೀಡಿ ದೀನ ದುರ್ಬಲ ವರ್ಗಗಳನ್ನು ಮತ್ತೊಮ್ಮೆ ಗುಲಾಮಗಿರಿಗೆ ದಬ್ಬುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಕವಾಗಿರುವುದು ಸಂವಿಧಾನಾತ್ಮಕ ಆಶಯಗಳಿಗೆ ವಿರುದ್ಧವಾಗಿದೆ ಎಂದರು. 

ಭೂ ಸುಧಾರಣೆ ಕಾನೂನ್ನು ಜಾರಿಗೆ ತಂದು ಭೂ ಮಾಲಕತ್ವವನ್ನು ನೀಡಿ, ಬಡವರನ್ನು ಉದ್ದಾರ ಮಾಡಬೇಕೆಂಬ ಆಶಯವನ್ನು ಅಂಬೇಡ್ಕರ್ ಹೊಂದಿದ್ದರೆ ಇಂದು ಮೋದಿ ಮತ್ತು ಯಡಿಯೂರಪ್ಪ ಸೇರಿದಂತೆ ಮೊದಲಾದವರು ಅನಗತ್ಯವಾದ ಮಸೂದೆಯನ್ನು ಜಾರಿಗೊಳಿಸಿ ರೈತರ ಹೊಟ್ಟೆ ಮೇಲೆ ಹೊಡೆಯುತ್ತಿರುವುದು ಅತ್ಯಂತ ಖಂಡನೀಯ ಕೃತ್ಯವಾಗಿದೆ ಎಂದು ಕಿಡಿಕಾರಿದರು. ಕೃಷಿ ಸಚಿವ ಬಿ.ಸಿ.ಪಾಟೀಲರಿಗೆ ಹೃದಯವಂತಿಕೆ ಮತ್ತು ಮಾನವೀಯತೆ ಕೊರತೆ ಇದೆ ಎಂದು ಟೀಕಿಸಿದರು.

80ರ ದಶಕದಲ್ಲಿ ಗುಂಡೂರಾಯರ ನೇತೃತ್ವದ ಸರ್ಕಾರ ನವಲಗುಂದ ಮತ್ತು ನರಗುಂದ ಪಟ್ಟಣಗಳಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸಿ ಅವರ ಸಾವಿಗೆ ಕಾರಣವಾದ ಹಿನ್ನಲೆಯಲ್ಲಿ ಅಧಿಕಾರ ವಂಚಿತವಾಯಿತು. ರೈತ ಕಾರ್ಮಿಕರ ಬೆಂಬಲದಿಂದ ರಾಮಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂತು. ಈಗಲಾದರೂ ರೈತ ನಾಯಕರೆಂದೇ ಹೆಸರಾಗಿರುವ ಬಿ.ಎಸ್.ಯಡಿಯೂರಪ್ಪ ಅವರು, ರೈತ ವಿರೋಧಿ ಭೂ ಮಸೂದೆಗಳನ್ನು ವಾಪಸ್ಸು ಪಡೆದುಕೊಂಡು ಪ್ರಜ್ಞಾ ಪೂರ್ವಕವಾಗಿ ರೈತರ ಹಿತವನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News